ADVERTISEMENT

‘ಪ್ರಧಾನಿ ಹುದ್ದೆಗೇರಲು ಅಂಬೇಡ್ಕರ್‌ ಅರ್ಹರಾಗಿದ್ದರು’-ನಟರಾಜ್ ಹುಳಿಯಾರ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 12:50 IST
Last Updated 18 ಜೂನ್ 2021, 12:50 IST
ಡಾ.ಬಿ.ಆರ್‌.ಅಂಬೇಡ್ಕರ್‌-ಸಾಂದರ್ಭಿಕ ಚಿತ್ರ
ಡಾ.ಬಿ.ಆರ್‌.ಅಂಬೇಡ್ಕರ್‌-ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ದೇಶದ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಗಳು ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಇದ್ದವು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಅವರಿಗಿತ್ತು. ಈ ಹುದ್ದೆ ಅಲಂಕರಿಸಲು ಜಾತಿ ವ್ಯವಸ್ಥೆ ಅಡ್ಡಿಯಾಯಿತು’ ಎಂದು ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ನಟರಾಜ್‌ ಹುಳಿಯಾರ್‌ ಅಭಿಪ್ರಾಯಪಟ್ಟರು.

ದಿ ಆಕ್ಸ್‌ಫರ್ಡ್‌ ಕಾಲೇಜ್‌ ಆಫ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಶುಕ್ರವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಸಮಕಾಲೀನ ಭಾರತ’ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಮೂಡಲು ಅಂಬೇಡ್ಕರ್‌ ಕಾರಣ. ಅವರು ದಲಿತರಿಗಷ್ಟೇ ಸೀಮಿತವಾಗದೆ ರಾಷ್ಟ್ರೀಯ ನಾಯಕರಾಗಿ ಬೆಳೆದರು. ಭಾರತದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. ಗಾಂಧಿ ನಂತರದ ಅತ್ಯಂತ ಪ್ರಭಾವಿ ಭಾರತೀಯ ಎಂದು ಅವರನ್ನು ಜನರೇ ಒಪ್ಪಿಕೊಂಡಿದ್ದರು. ಅಂಬೇಡ್ಕರ್‌ ಬಗೆಗೆ ಜನರಿಗೆ ಪೂಜ್ಯ ಭಾವನೆ ಇತ್ತು. ಬೀದಿ ಬೀದಿಗಳಲ್ಲಿ ಅವರ ಪ್ರತಿಮೆಗಳನ್ನು ನಿರ್ಮಿಸಿರುವುದು ಇದಕ್ಕೆ ಸಾಕ್ಷಿ’ ಎಂದರು.

ADVERTISEMENT

‘ದಲಿತ ಸಾಹಿತ್ಯಕ್ಕೆ ಅಂಬೇಡ್ಕರ್‌ ಪ್ರೇರಣೆ. ನೀಲಿ ಬಣ್ಣ ಸಮಾನತೆಯ ಸಂಕೇತ ಎಂಬುದನ್ನು ಮನಗಂಡಿದ್ದ ಅವರು ಈ ಬಣ್ಣವನ್ನು ಹೆಚ್ಚು ಇಷ್ಟಪಡುತ್ತಿದ್ದರು.ಪ್ರಾಚೀನ ಇತಿಹಾಸ ಅರಿತುಕೊಳ್ಳುವ ಸಲುವಾಗಿ ಸಂಸ್ಕೃತ ಕಲಿತಿದ್ದರು. ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿದ್ದರು. ಮೇಲ್ವರ್ಗ ಹಾಗೂ ಕೆಳವರ್ಗದವರಲ್ಲಿ ಜಾಗೃತಿ ಮೂಡಿಸಲೂ ಮುಂದಾಗಿದ್ದರು’ ಎಂದು ತಿಳಿಸಿದರು.

‘ಬುದ್ಧ, ಬಸವೇಶ್ವರರಿಂದ ಸಾಧ್ಯವಾಗದ ಕೆಲಸವನ್ನು ಅಂಬೇಡ್ಕರ್‌ ಮಾಡಿ ತೋರಿಸಿದ್ದರು. 65 ವರ್ಷಗಳ ಜೀವಿತಾವಧಿಯಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಅವರ ಆಲೋಚನಾ ಕ್ರಮ ಹಾಗೂ ಪರಿಶ್ರಮದಿಂದಾಗಿ ಭಾರತದ ಇತಿಹಾಸದ ಚಕ್ರ ಮತ್ತೊಂದು ಮಗ್ಗುಲಿಗೆ ಹೊರಳಿತು’ ಎಂದು ಹೇಳಿದರು.

ಆಕ್ಸ್‌ಫರ್ಡ್‌ ಕಾಲೇಜಿನ ಪ್ರಾಂಶುಪಾಲೆ ನಿಖಿತಾ ಆಲೂರ್‌, ಪ್ರೊ.ಡಿ.ಎಸ್‌.ಜಯಸಿಂಹ, ಬಿ.ಇ.ಶಿವರಾಜ, ವೈ.ಶರತ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.