ADVERTISEMENT

ರಾಷ್ಟ್ರ ಮಟ್ಟದ ವಿಜ್ಞಾನ ಮೇಳದಲ್ಲಿ ಸಾಧನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:11 IST
Last Updated 9 ಜನವರಿ 2019, 19:11 IST
ಪ್ರಶಸ್ತಿ ಹಾಗೂ ಪಾರಿತೋಷಕದೊಂದಿಗೆ ಶಿವಮೊಗ್ಗ ಪೋದಾರ್‌ ಶಾಲೆಯ ವಿದ್ಯಾರ್ಥಿಗಳು
ಪ್ರಶಸ್ತಿ ಹಾಗೂ ಪಾರಿತೋಷಕದೊಂದಿಗೆ ಶಿವಮೊಗ್ಗ ಪೋದಾರ್‌ ಶಾಲೆಯ ವಿದ್ಯಾರ್ಥಿಗಳು   

ಶಿವಮೊಗ್ಗ: ಇಲ್ಲಿನ ಪೋದಾರ್ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಬಾಲವಿಜ್ಞಾನಿ ಗೌರವ ಮತ್ತು ಪಾರಿತೋಷಕ ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ಜುನೇದ್ ಪೀರ್ ಮತ್ತು ಪರಿತೋಷ್ ಜೂನಿಯರ್ ವಿಭಾಗದಲ್ಲಿ ಬಾಲವಿಜ್ಞಾನಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾ
ಲರಾದ ಸುಕೇಶ್ ಸೇರಿಗಾರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹೈಡ್ರಾದ ಸಹಾಯದಿಂದ ಕೆರೆಗಳ ಹಸಿರು ಪಾಚಿ ನಿವಾರಣೆ’ ವಿಷಯದ ಮೇಲೆ ಸಂಶೋಧನೆ ನಡೆಸಿದ್ದಕ್ಕೆ ಈ ಪ್ರಶಸ್ತಿ ಬಂದಿದೆ. ಇದು ಕೇವಲ ಪ್ರಶಸ್ತಿ ಅಲ್ಲ; ಮಲಿನಗೊಂಡ ಕೆರೆಗಳಿಗೆ ಸಿಕ್ಕಿರುವ ಪರಿಹಾರವೂ ಹೌದು ಎಂದರು.

ADVERTISEMENT

ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ಜುನೇದ್ ಪೀರ್ ಹಾಗೂ ಪರಿತೋಷ್, ‘ಕೆರೆಗಳಲ್ಲಿ ಹಸಿರು ಪಾಚಿ ಬೆಳೆಯುವುದರಿಂದ ಸೂರ್ಯನ ಬೆಳಕು ನೀರಿನ ಆಳ ಪ್ರವೇಶಿಸುವುದಿಲ್ಲ. ಇದರಿಂದ ನೀರು ವಿಷವಾಗುತ್ತದೆ. ಹಸಿರು ಪಾಚಿಯನ್ನು ತಿನ್ನುವ ಹೈಡ್ರಾ ಎಂಬ ನಿಡೇರಿಯಾ ವರ್ಗದ ಜೀವಿಯನ್ನು ಕೆರೆಗೆ ಬಿಡುವುದರಿಂದ ಅದು ಪಾಚಿಯನ್ನು ತಿನ್ನುತ್ತದೆ. ವಿಷವನ್ನು ಅರಗಿಸುವ ಸಾಮರ್ಥ್ಯವನ್ನು ಆ ಜೀವಿ ಹೊಂದಿದೆ. ಇದನ್ನು ನಾವು ಸಂಶೋಧನೆಯ ಮೂಲಕ ತಿಳಿಸಿದೆವು’ ಎಂದರು.

ಸೀನಿಯರ್ ವಿಭಾಗದಲ್ಲಿ ಪಾರಿತೋಷಕ ಪಡೆದ ಶ್ರೀಯಾ ಮತ್ತು ಆರ್.ಆದ್ಯಾ ತಮ್ಮ ಸಂಶೋಧನೆಯ ಬಗ್ಗೆ ವಿವರ ನೀಡಿ, ‘ಇತ್ತೀಚೆಗೆ ಮಕ್ಕಳು ಮೊಬೈಲ್‌ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ನಮ್ಮ ಶಾಲೆಯ ವಿಜ್ಞಾನ ಶಿಕ್ಷಕರು ಹಾಗೂ ಕೆಲವು ವೈದ್ಯರನ್ನು ಭೇಟಿ ಮಾಡಿ ಹೊಸ ‘ಆ್ಯಪ್‌’ ರಚಿಸುವುದರ ಮೂಲಕ ಸಮಸ್ಯೆಗೆ ಉತ್ತರ ಹುಡುಕಿದೆವು. ಈ ‘ಆ್ಯಪ್‌’ ಹೆಸರು ಹವ್ಯಾಸಿನಿ. ಇದನ್ನು ಮೊಬೈಲ್‌ನಲ್ಲಿ ಬಳಸಿದರೆ ಮಗು ಎಷ್ಟು ಹೊತ್ತು ಮತ್ತು ಏನನ್ನು ನೋಡಿತು ಎಂದು ಗೊತ್ತಾಗುತ್ತದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರಾದ ಯಶಸ್ವಿನಿ, ಅನುರಾಧ, ಸುರೇಶ್, ಶ್ರೀಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.