ADVERTISEMENT

58 ಲಕ್ಷ ಪ್ರಕರಣ ಇತ್ಯರ್ಥ: ₹2,878 ಕೋಟಿ ಪರಿಹಾರ

2ನೇ ರಾಷ್ಟ್ರೀಯ ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 16:26 IST
Last Updated 15 ಜುಲೈ 2025, 16:26 IST
ಸುದ್ದಿಗೋಷ್ಠಿಯಲ್ಲಿ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಅವರು (ಕುಳಿತಿರುವವರು) ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ಶಶಿಧರ ಶೆಟ್ಟಿ ಅವರಿಂದ ವಿವರ ಪಡೆದರು  
ಸುದ್ದಿಗೋಷ್ಠಿಯಲ್ಲಿ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಅವರು (ಕುಳಿತಿರುವವರು) ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ಶಶಿಧರ ಶೆಟ್ಟಿ ಅವರಿಂದ ವಿವರ ಪಡೆದರು     

ಬೆಂಗಳೂರು: ಇದೇ 12ರಂದು ರಾಜ್ಯದಾದ್ಯಂತ ನಡೆದ ಪ್ರಸಕ್ತ ಸಾಲಿನ 2ನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ, ನ್ಯಾಯಾಲಯಗಳಲ್ಲಿ ಬಾಕಿ ಇದ್ದ 3.11 ಲಕ್ಷ ಪ್ರಕರಣಗಳೂ ಸೇರಿದಂತೆ ಒಟ್ಟು 58.67 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಸಂಬಂಧಿಸಿದವರಿಗೆ ₹2,878 ಕೋಟಿ ಪರಿಹಾರ ಕೊಡಿಸಲಾಗಿದೆ.

ಈ ಕುರಿತಂತೆ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ರಾಜ್ಯ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಅದಾಲತ್‌ನಲ್ಲಿ 1,756 ವೈವಾಹಿಕ ಪ್ರಕರಣಗಳನ್ನು ಪರಿಹರಿಸಲಾಗಿದ್ದು, ಒಟ್ಟು 331 ದಂಪತಿಗಳು ರಾಜಿ ಸಂಧಾನದ ಮೂಲಕ ಪುನಃ ಒಟ್ಟಿಗೇ ಜೀವನ ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘ಅದಾಲತ್‌ನಲ್ಲಿ ಒಟ್ಟು 1,022 ಪೀಠಗಳನ್ನು ಸ್ಥಾಪಿಸಲಾಗಿತ್ತು. ಅವುಗಳಲ್ಲಿ ಹೈಕೋರ್ಟ್‌ಗಳಲ್ಲಿದ್ದ 1,182, ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿದ್ದ 3,09,995 ಕೇಸುಗಳೂ ಸೇರಿದಂತೆ ಒಟ್ಟು 3,11,177 ಬಾಕಿ ಪ್ರಕರಣಗಳು ಮತ್ತು 55,56,255 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಒಂದು ವೇಳೆ ಕೋರ್ಟ್‌ಗಳಲ್ಲಿ ಬಾಕಿ ಇದ್ದ 3.11ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾದರೆ 1,152 ನ್ಯಾಯಾಧೀಶರು 68 ದಿನಗಳ ಕಾಲ ಕಾರ್ಯ ನಿರ್ವಹಿಸಬೇಕಾಗುತ್ತಿತ್ತು’ ಎಂದು ವಿವರಿಸಿದರು.

ಈ ಬಾರಿಯ ಅದಾಲತ್‌ನ ವಿಶೇಷತೆಗಳು:

* 4015 ವಿಭಾಗ ದಾವೆ (ಪಾರ್ಟಿಷನ್‌ ಸೂಟ್‌) ಇತ್ಯರ್ಥ; 4961 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳ ಇತ್ಯರ್ಥ. ಸಂತ್ರಸ್ತರಿಗೆ ₹290 ಕೋಟಿ ಪರಿಹಾರ

* 13542 ಚೆಕ್‌ ಬೌನ್ಸ್‌ ಪ್ರಕರಣ ವಿಲೇವಾರಿ. ₹572 ಕೋಟಿ ಪರಿಹಾರ

* 456 ಎಲ್‌ಎಸಿ ಅಮಲ್ಜಾರಿ ಪ್ರಕರಣ ಇತ್ಯರ್ಥ. ₹64 ಕೋಟಿ ಪರಿಹಾರ

* 375 ಗ್ರಾಹಕ ವ್ಯಾಜ್ಯಗಳ ಇತ್ಯರ್ಥ. ₹406 ಕೋಟಿ ಪರಿಹಾರ

* 5 ವರ್ಷಕ್ಕೂ ಹಳೆಯದಾದ 2377 10 ವರ್ಷಕ್ಕೂ ಹಳೆಯದಾದ 275 ಹಾಗೂ 15 ವರ್ಷಕ್ಕೂ ಹಳೆಯದಾದ 38 ಪ್ರಕರಣಗಳೂ ಸೇರಿದಂತೆ ಒಟ್ಟು 2689 ಹಳೆಯ ಪ್ರಕರಣಗಳ ಇತ್ಯರ್ಥ

* ರಾಜಿ ಸಂಧಾನದ ಮೂಲಕ ಬೆಂಗಳೂರಿನ 8ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಕೋರ್ಟ್‌ನಲ್ಲಿದ್ದ 28 ವರ್ಷ ಹಾಗೂ 27 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್‌ ಪ್ರಕರಣಗಳ ವಿಲೇವಾರಿ

* ಬೆಂಗಳೂರು ನಗರ ಜಿಲ್ಲೆಯಲ್ಲಿ ₹1.75 ಕೋಟಿ ಮೊತ್ತದ ಒಂದು ಎಂವಿಸಿ (ಮೋಟಾರು ವಾಹನ ಕಾಯ್ದೆ) ₹6.56 ಕೋಟಿ ಮೊತ್ತದ ಒಂದು ಹಾಗೂ ₹5.15 ಕೋಟಿ ಮೊತ್ತದ ಮತ್ತೊಂದು ಚೆಕ್‌ ಅಮಾನ್ಯ ಪ್ರಕರಣಗಳ ಇತ್ಯರ್ಥ

* ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ₹40.66 ಕೋಟಿ ಪರಿಹಾರದ ಅಸಲು ದಾವೆ ಇತ್ಯರ್ಥ

* ಮುಂದಿನ ರಾಷ್ಟ್ರೀಯ ಲೋಕ ಅದಾಲತ್‌ ಸೆಪ್ಟೆಂಬರ್ 13ಕ್ಕೆ ರಾಜ್ಯದಾದ್ಯಂತ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.