ADVERTISEMENT

ಕೊಡಗಿಗೆ ಬಂದ ಎನ್‌ಡಿಆರ್‌ಎಫ್‌

ಲಘು ಭೂಕಂಪನ: ಶೀಘ್ರವೇ ಜಿಲ್ಲೆಗೆ ಭೂವಿಜ್ಞಾನಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಮೇ 2019, 12:34 IST
Last Updated 27 ಮೇ 2019, 12:34 IST
ಕೊಡಗು ಜಿಲ್ಲೆಗೆ ಬಂದಿರುವ ಎನ್‌ಡಿಆರ್‌ಎಫ್‌
ಕೊಡಗು ಜಿಲ್ಲೆಗೆ ಬಂದಿರುವ ಎನ್‌ಡಿಆರ್‌ಎಫ್‌   

ಮಡಿಕೇರಿ: ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ್ದ ಪ್ರಾಕೃತಿಕ ವಿಕೋಪದ ಬಳಿಕ ಎಚ್ಚೆತ್ತಿರುವ ಜಿಲ್ಲಾಡಳಿತವು ಈ ವರ್ಷ ಮಳೆಗಾಲದ ಅನಾಹುತ ಎದುರಿಸಲು ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.

ಮುಂಗಾರು ಪ್ರವೇಶಕ್ಕೂ ಮುನ್ನವೇ ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ) ಒಂದು ತುಕಡಿಯು ಜಿಲ್ಲೆಗೆ ಬಂದಿದ್ದು ಭೂಕುಸಿತ ಪ್ರದೇಶದಲ್ಲಿ ಅಣಕು ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಭೂಕುಸಿತ ಪ್ರದೇಶವಾದ ಹೆಬ್ಬೆಟ್ಟಗೇರಿ ಹಾಗೂ ಕೊಪ್ಪತ್ತೂರು ಗ್ರಾಮದ ಹಟ್ಟಿಹೊಳೆಯಲ್ಲಿ ಇದೇ 29ರಂದು ಜಿಲ್ಲಾ ಪೊಲೀಸ್‌ ತಂಡ, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್‌ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಜತೆಗೂಡಿ ಎನ್‌ಡಿಆರ್‌ಎಫ್‌ ತಂಡವು ಪ್ರಕೃತಿ ವಿಕೋಪದ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ನಡೆಸಲಿದೆ.

ಕಮಾಂಡರ್‌ ವೇಲೂರು ರಮೇಶ್‌ ಹಾಗೂ ದೊಡ್ಡಬಸಪ್ಪ ನೇತೃತ್ವದಲ್ಲಿ ಆಂಧ್ರಪ್ರದೇಶದಿಂದ 26 ಮಂದಿಯ ತಂಡವು ಅಗತ್ಯ ರಕ್ಷಣಾ ಸಲಕರಣೆಯೊಂದಿಗೆ ಆಗಮಿಸಿದ್ದು ಗಾಳಿಬೀಡು ಸಮೀಪದ ನವೋದಯ ಶಾಲೆಯಲ್ಲಿ ವಾಸ್ತವ್ಯ ಹೂಡಿದೆ. ಮಳೆಗಾಲದಲ್ಲಿ ಅನಾಹುತ ಸಂಭವಿಸಿದರೆ ಈ ತಂಡವು ರಕ್ಷಣಾ ಕಾರ್ಯದಲ್ಲಿ ತೊಡಗಲಿದೆ.

ADVERTISEMENT

‘ಜಿಲ್ಲಾಡಳಿತ ಕೋರಿಕೆಯಂತೆ ಬಂದಿದ್ದು ಸ್ಥಳೀಯ ಪರಿಸ್ಥಿತಿಯನ್ನು ತಿಳಿಯುತ್ತಿದ್ದೇವೆ. ಅಧಿಕಾರಿಗಳು ಹಾಗೂ ಕಳೆದ ವರ್ಷ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಂದ ಮಾಹಿತಿ ಪಡೆದು ಕಾರ್ಯ ನಿರ್ವಹಿಸುತ್ತೇವೆ. ಮಳೆ ಪರಿಸ್ಥಿತಿ ಅವಲೋಕಿಸಿ ಅಗತ್ಯವಿರುವ ಸ್ಥಳಕ್ಕೆ ತೆರಳಿ ಆಪತ್ತಿನಲ್ಲಿದ್ದವರ ರಕ್ಷಣೆ ಮಾಡಲು ಸಿದ್ಧವಿದ್ದೇವೆ’ ಎಂದು ರಮೇಶ್‌ ತಿಳಿಸಿದರು.

‘ಧಾರವಾಡ ಬಹುಮಹಡಿ ಕಟ್ಟಡ ದುರಂತದಲ್ಲಿ ರಕ್ಷಣಾ ಕಾರ್ಯ, ಕಳೆದ ವರ್ಷ ಮಾಕುಟ್ಟ–ಕೇರಳ ಅಂತರ ರಾ‌ಜ್ಯ ಹೆದ್ದಾರಿಯಲ್ಲಿ ಭೂಕುಸಿತ ಹಾಗೂ ಮರಗಳ ತೆರವು ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿದ್ದ ಅನುಭವವು ಈ ತಂಡಕ್ಕಿದೆ’ ಎಂದು ಸಿಬ್ಬಂದಿ ಹೇಳಿದರು.

ಕಳೆದ ವರ್ಷ ವಾಡಿಕೆಗೂ ಮೀರಿ ಮಳೆ ಸುರಿದಿತ್ತು. ಬೆಟ್ಟಗಳು ಕುಸಿದು ಅಪಾರ ಹಾನಿ ಸಂಭವಿಸಿತ್ತು. 19 ಮಂದಿ ಸಾವನ್ನಪ್ಪಿದ್ದರು. ಪ್ರತಿಕೂಲ ವಾತಾವರಣದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆಯೂ ಸಾಧ್ಯವಾಗಿರಲಿಲ್ಲ. ದುರಂತ ಸಂಭವಿಸಿದ ನಂತರ ಎಸ್‌ಡಿಆರ್‌ಎಫ್‌, ಕಾರವಾರದ ನೌಕಾಪಡೆ, ಯೋಧರು ಜಿಲ್ಲೆಗೆ ಬಂದು ನೂರಾರು ಮಂದಿ ನಿರಾಶ್ರಿತರನ್ನು ರಕ್ಷಿಸಿದ್ದರು. ಆದರೆ, ಈ ವರ್ಷ ಜಿಲ್ಲಾಡಳಿತ ಸಾಕಷ್ಟು ಸಿದ್ಧತೆ ನಡೆಸಿದೆ.

ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ಭೂವಿಜ್ಞಾನಿಗಳ ತಂಡದ ಮಧ್ಯಂತರ ವರದಿ ಆಧರಿಸಿ ಭೂಕುಸಿತ ಸಾಧ್ಯತೆಯ 13 ಪ್ರದೇಶಗಳನ್ನು ಗುರುತಿಸಲಾಗಿದೆ. ಆ ಸ್ಥಳಗಳಿಗೆ ಎನ್‌ಡಿಆರ್‌ಎಫ್‌ ತಂಡವು ಭೇಟಿ ಪರಿಶೀಲಿಸಿದೆ. ಮಳೆಯಲ್ಲಿ ವಿಪತ್ತು ಸಂಭವಿಸಿದರೆ ಜನರು ಹಾಗೂ ಸಾಕು ಪ್ರಾಣಿಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ತಜ್ಞರ ಭೇಟಿ: ಕೊಡಗಿನ ದಕ್ಷಿಣ ಭಾಗದಲ್ಲಿ ಸ್ಥಳೀಯರಿಗೆ ಗುರುವಾರ ರಾತ್ರಿ ಲಘು ಭೂಕಂಪನದ ಅನುಭವವಾಗಿದ್ದು ಮುಂದಿನ ವಾರ ಆ ಗ್ರಾಮಗಳಿಗೆ ಭೂವಿಜ್ಞಾನಿಗಳು ಭೇಟಿ ನೀಡುವ ಸಾಧ್ಯತೆಯಿದೆ. ಜಿಲ್ಲಾಡಳಿತವು ಭೂಗರ್ಭಶಾಸ್ತ್ರ ಇಲಾಖೆ ಅಧಿಕಾರಿಗಳಿಗೆ ಕಂಪನದ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.