ADVERTISEMENT

‘ಬರೀ ಅಕ್ಕಿ, ಗೋಧಿ ತಿನ್ನೋಕಾಗುತ್ತಾ..’

ನಗರಸಭೆ ಮುಂಭಾಗ ನಾಗೇಂದ್ರನಮಟ್ಟಿಯ 50 ಮಹಿಳೆಯರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 13:53 IST
Last Updated 18 ಏಪ್ರಿಲ್ 2020, 13:53 IST
   

ಹಾವೇರಿ: ‘ಲಾಕ್‌ಡೌನ್‌ನಿಂದ ಜೀವನ ನಡೆಸುವುದು ತೀವ್ರ ಕಷ್ಟವಾಗಿದೆ. ಆದ್ದರಿಂದ ನಮಗೆ ಆರ್ಥಿಕ ನೆರವು ನೀಡಬೇಕು’ ಎಂದು ನಾಗೇಂದ್ರನಮಟ್ಟಿಯ 14ನೇ ವಾರ್ಡ್‌ ಮಹಿಳೆಯರು ನಗರಸಭೆ ಮುಂಭಾಗ ಶನಿವಾರ ಧರಣಿ ನಡೆಸಿದರು.

ಸರ್ಕಾರ ನಮಗೆ ಎರಡು ತಿಂಗಳ ಅಕ್ಕಿ ಮತ್ತು ಗೋಧಿಯನ್ನು ಕೊಟ್ಟಿದೆ. ಬರೀ ಇದನ್ನೇ ತಿನ್ನೋಕೆ ಆಗುತ್ತಾ. ಅಡುಗೆ ಮಾಡಲು ಮನೆಯಲ್ಲಿ ಎಣ್ಣೆ, ಉಪ್ಪು, ಸಕ್ಕರೆ, ತರಕಾರಿ, ಬೇಳೆಕಾಳು ಏನೂ ಇಲ್ಲ. ಅಂಗಡಿಯಲ್ಲಿ ಕೊಳ್ಳೋಕೆ ಕೈಯಲ್ಲಿ ರೊಕ್ಕ ಇಲ್ಲ. ಹಾಗಾಗಿ ನಮಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಹಳ್ಳಿ–ಹಳ್ಳಿ ತಿರುಗಿ ಬಾಚಿಣಿಗೆ, ಹೇರ್‌ಪಿನ್‌, ಕಸಬರಿಕೆ, ಹರವಿ, ಪ್ಲಾಸ್ಟಿಕ್‌ ವಸ್ತು ಮಾರುವ ನಮನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈಗ ಹಳ್ಳಿಗಳಿಗೆ ಗ್ರಾಮಸ್ಥರು ಬಿಟ್ಟುಕೊಳ್ಳುತ್ತಿಲ್ಲ. ನಗರದ ರಸ್ತೆ ಬದಿ ಕಾಯಿ–ಪಲ್ಯ ಮಾರಲು ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ. ತಳ್ಳುವ ಗಾಡಿಗಳು ಇದ್ದರೆ ಮಾತ್ರ ತರಕಾರಿ ಮಾರಲು ಅವಕಾಶ ಕೊಡುತ್ತಾರೆ. ನಮ್ಮ ಬಳಿ ತಳ್ಳು ಗಾಡಿಗಳಿಲ್ಲ. ಜೀವನ ನಡೆಸುವುದು ಹೇಗೆ ಎಂದು ಮಹಿಳೆಯರು ಪ್ರಶ್ನಿಸಿದರು.

ADVERTISEMENT

‘ಖಾರದಪುಡಿ, ಸೋಪು, ಉಪ್ಪು ಇಲ್ಲದಿದ್ದರೆ ಮನೆ ನಡೆಯಲ್ಲ, ದುಡಿಮೆಯಿಲ್ಲದ ನಾವು ಸಣ್ಣ ಮಕ್ಕಳನ್ನು ಸಾಕುವುದು ಹೇಗೆ ಅಂತ ತಿಳಿಯುತ್ತಿಲ್ಲ. ಒಂದು ದಿನ ಹಾಲು ಕೊಟ್ಟಿದ್ದು ಬಿಟ್ಟರೆ, ಮತ್ತೆ ಯಾರೂ ನಮ್ಮ ವಾರ್ಡ್‌ಗೆ ಬಂದಿಲ್ಲ. ಅಧಿಕಾರಿಗಳು ನಮಗೆ ದಿನಸಿ ಸಾಮಗ್ರಿಯನ್ನು ಉಚಿತವಾಗಿ ಕೊಟ್ಟರೆ ಬದುಕುತ್ತೀವಿ’ ಎಂದು ಜಾಹೀದಾಬಾನು, ಸಲ್ಮಾ ಬಡಿಗೇರ ಮನವಿ ಮಾಡಿದರು.

ಅನಸೂಯಾ ಕುಂಚಿಕೋರ, ಗಂಗವ್ವ, ಹನುಮವ್ವ, ರೇಣುಕಾ, ಖುರೇಷಿಯಾ, ಇರ್ಷಾದಾ ಬಾನು ಗುತ್ತಲ, ಸಬೀನಾ, ಮೀನಾ ಮೊಕಾಶಿ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.