ADVERTISEMENT

ಹಿಂದುಳಿದವರಿಗೆ ಮೀಸಲು ಅಗತ್ಯ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 19:33 IST
Last Updated 10 ಫೆಬ್ರುವರಿ 2021, 19:33 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ‘ನಾನು ಯಾವುದೇ ಸಂಘಟನೆ (ಹಿಂದ) ಕುರಿತು ಮಾತನಾಡಿಲ್ಲ. ನಾನು ಹೇಳದ ವಿಚಾರದ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಾಜಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ನಿವಾಸಕ್ಕೆ ಬುಧವಾರ ಭೇಟಿ ನೀಡಿ, ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು. ದೇಶದ ಸಂವಿಧಾನ ಕೂಡಾ ಇದನ್ನು ಹೇಳಿದೆ’ ಎಂದು ಪ್ರತಿಪಾದಿಸಿದರು.

‘ಯಾರೇ ಮೀಸಲಾತಿ ಕೇಳಿದರೂ ನಾನು ವಿರೋಧಿಸುವುದಿಲ್ಲ. ಮೀಸಲಾತಿ ಆಗ್ರಹಿಸಿ ಯಾರು ಬೇಕಾದರೂ ಹೋರಾಟ ಮಾಡಬಹುದು’ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರನ್ನು ಸನ್ಮಾನಿ ಸಲುಕುರುಬ ಸಂಘದವರು ಸಮಾವೇಶ ಆಯೋಜಿಸುತ್ತಿದ್ದಾರೆ’ ಎಂದ ಅವರು, ‘ಕುರುಬ ಸಮುದಾಯದ ಎಸ್‌.ಟಿ ಹೋರಾಟ ಮತ್ತು ಸಚಿವ ಕೆ.ಎಸ್‌. ಈಶ್ವರಪ್ಪ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಆರೋಗ್ಯ ಸಮಸ್ಯೆ

ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ‘ನನ್ನ ಮತ್ತು ಸಿದ್ದರಾಮಯ್ಯ ನಡುವಿನ ಬಾಂಧವ್ಯ ಹಿಂದೆ ಹೇಗಿತ್ತೊ ಈಗಲೂ ಹಾಗೇ ಇದೆ. ಸಂವಿಧಾನದ ಆಶಯಕ್ಕೆ ಧಕ್ಕೆಯಾದಾಗ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕೇವಲ ಅಧಿಕಾರ ಮಾಡುತ್ತಾ ಇದ್ದವರಲ್ಲ. ಆರೋಗ್ಯ ಸಮಸ್ಯೆಯಿಂದಾಗಿ ಕೆಲವು ದಿನಗಳಿಂದ ನಾನು ಮನೆಯಿಂದ ಹೊರಗೆ ಬಂದಿಲ್ಲ’ ಎಂದರು.

13ಕ್ಕೆ ಅಹಿಂದ ಒಕ್ಕೂಟದ ಸಭೆ

ಮಡಿಕೇರಿ: ಮಡಿಕೇರಿಯಲ್ಲಿ ಫೆ.13ರಂದು ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ಸಭೆ ಕರೆಯಲು ನಿರ್ಧರಿಸಲಾಗಿದೆ. ‘ರಾಜ್ಯದ ವಿವಿಧ ಸಮುದಾಯಗಳು, ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿವೆ. ಅಹಿಂದ ಕೊಡಗು ಜಿಲ್ಲಾ ಘಟಕವು ಕೆಲವು ತಿಂಗಳಿಂದ ತಟಸ್ಥವಾಗಿತ್ತು. ಕೊಡಗಿನ ಕೆಲವು ಸಣ್ಣಪುಟ್ಟ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ. ಹೀಗಾಗಿ, ನಾವೂ ಕೆಲವು ಬೇಡಿಕೆಯೊಂದಿಗೆ ಮತ್ತೆ ಹೋರಾಟ ಆರಂಭಿಸುತ್ತಿದ್ದೇವೆ. ಅಂದಿನ ಸಭೆಯಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಗುವುದು’ ಎಂದು ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಿದ್ದರಾಮಯ್ಯ ಒಂದು ಜಾತಿಗೆ ಸೀಮಿತವಲ್ಲ’

ಹರಿಹರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಹಿಂದ ನಾಯಕ. ಅವರು ಒಂದು ಜಾತಿಗೆ ಸೀಮಿತವಲ್ಲ ಎಂದು ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ಪಾದಯಾತ್ರೆ ಮುಗಿಸಿ ಬೆಳ್ಳೂಡಿ ಕನಕ ಗುರುಪೀಠದ ಶಾಖಾ ಮಠಕ್ಕೆ ಬುಧವಾರ ಮರಳಿದ ಸ್ವಾಮೀಜಿ ಅವರನ್ನು ಬೈಕ್ ರ‍್ಯಾಲಿ ಮೂಲಕ ಭಕ್ತರು ಸ್ವಾಗತಿಸಿದಾಗ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.