ADVERTISEMENT

ಹೊಸ ವೈಮಾನಿಕ ನೀತಿ ಸಿದ್ಧ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 21:26 IST
Last Updated 19 ಜೂನ್ 2022, 21:26 IST
   

ಬೆಂಗಳೂರು: ‘ನಗರದಲ್ಲಿ ನ. 2ರಿಂದ ಮೂರು ದಿನ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಪೂರ್ವಭಾವಿಯಾಗಿ ‘ವೈಮಾನಿಕ (ಏರೋಸ್ಪೇಸ್) ಮತ್ತು ರಕ್ಷಣಾ ನೀತಿ 2022-27’ ಅನ್ನು ಸಿದ್ಧಪಡಿಸಲಾಗಿದೆ. ಈ ನೀತಿಯ ಮೂಲಕ ಕರ್ನಾಟಕವನ್ನು ಆದ್ಯತೆಯ ಹೂಡಿಕೆಯ ತಾಣವಾಗಿ ರೂಪಿಸುವ ಗುರಿ ಹೊಂದಲಾಗಿದೆ’ ಎಂದುಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

‘ಏರೋಸ್ಪೇಸ್ ಮತ್ತು ರಕ್ಷಣಾ ತಯಾರಿಕಾ ವಲಯದಲ್ಲಿ ‌ರಕ್ಷಣಾ ಸಚಿವಾಲಯವು 2027 ರ ವೇಳೆಗೆ ಶಸ್ತ್ರಾಸ್ತ್ರದಲ್ಲಿ ಶೇ 70ರಷ್ಟು ಸ್ವಾವ ಲಂಬನೆಯ ಗುರಿ ಹೊಂದಿದೆ. ಇದು ಬಂಡವಾಳ ಹೂಡಿಕೆದಾರರಿಗೆ ದೊಡ್ಡ ನಿರೀಕ್ಷೆಗಳನ್ನು ಸೃಷ್ಟಿಸುವ ಸಂಭವವಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘5 ವರ್ಷಗಳ ಈ ನೀತಿಯ ಅವಧಿಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ₹ 45 ಸಾವಿರ ಕೋಟಿ ಹೂಡಿಕೆ ಆಕರ್ಷಿಸಲು, 60 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ರಾಜ್ಯವನ್ನು ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಜೊತೆಗೆ ಭಾರತೀಯ ಮಾರುಕಟ್ಟೆ ಮತ್ತು ರಫ್ತು ಎರಡಕ್ಕೂ ಇದು ಹೆಚ್ಚಿನ ಅನುಕೂಲ ಕಲ್ಪಿಸುವುದು ಈ‌ ನೀತಿಯ ಮುಖ್ಯ ಲಕ್ಷಣ’ ಎಂದೂ ನಿರಾಣಿ ತಿಳಿಸಿದ್ದಾರೆ.

ADVERTISEMENT

‘ಇಡೀ ದೇಶದಲ್ಲಿ ರಕ್ಷಣಾ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳು ಮತ್ತು ಉತ್ಪನ್ನಗಳ ತಯಾರಿಕೆಯಲ್ಲಿ ಕರ್ನಾಟಕದ ಪಾಲು ಶೇ 40 ರಷ್ಟು ಇದೆ. ಮತ್ತಷ್ಟು ಉತ್ತೇಜನ ನೀಡಲು, ಈ ನೀತಿಯು ಬಾಹ್ಯಾಕಾಶ, ರಕ್ಷಣಾ ಮತ್ತು ಏರೋ ಸ್ಪೇಸ್ ತಯಾರಕರು ಹಾಗೂ ಇತರ ಉಪ-ವಲಯಗಳಿಗೆ ಬೃಹತ್ ಭೂಮಿ ಮತ್ತು ಆರ್ಥಿಕ ಪ್ರೋತ್ಸಾಹದ ಪ್ಯಾಕೇಜ್‌ ಒದಗಿಸಲಿದೆ. ಹೊಸ ‌ನೀತಿ ಅಡಿಯಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರ ‌ಸೇರಿದಂತೆ ರಾಜ್ಯದ 5 ಏರೋಸ್ಪೇಸ್ ಮತ್ತು ಡಿಫೆನ್ಸ್ ಹಬ್‌ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ’ ಎಂದಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.