ಬೆಂಗಳೂರು: ದಸರಾ ರಜೆಯ ಅವಧಿಯಲ್ಲಿ ಶಾಲಾ ಶಿಕ್ಷಕರ ಮೂಲಕ ಜಾತಿವಾರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಬಗ್ಗೆ ಹಿಂದುಳಿದ ವರ್ಗಗಳ ಆಯೋಗವು ಸಿದ್ದತೆ ನಡೆಸಿದೆ.
‘ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರ ಮೂಲಕ ನಡೆಸಿದ ಇಂತಹ ಸಮೀಕ್ಷೆಗಳು ಕರಾರುವಾಕ್ಕಾಗಿ ಇದ್ದ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ಶಿಕ್ಷಕರನ್ನೇ ಈ ಸಮೀಕ್ಷೆಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಜಿ. ನಾಯಕ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
‘ಸಮೀಕ್ಷೆಯ ಪ್ರಶ್ನಾವಳಿಯು ಬಹುತೇಕ ಸಿದ್ಧವಾಗಿದೆ. ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗುತ್ತಿದೆ. ದಸರಾ ಸಂದರ್ಭದಲ್ಲಿ ಶಾಲೆಗಳಿಗೆ 15 ದಿನ ರಜೆ ಇರುತ್ತದೆ. ಅದನ್ನು ಇನ್ನೂ ಹತ್ತು ದಿನ ವಿಸ್ತರಿಸಿ, ಒಟ್ಟು 25 ದಿನಗಳಲ್ಲಿ ಸಮೀಕ್ಷೆ ನಡೆಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ಸರ್ಕಾರವು ಸಮೀಕ್ಷೆಗೆ ಶಿಕ್ಷಕರನ್ನು ಒದಗಿಸದೇ ಇದ್ದರೆ, ಆಶಾ ಕಾರ್ಯಕರ್ತರು ಮತ್ತು ಕಂದಾಯ ವಸೂಲಿಗಾರರನ್ನು ಬಳಸಿಕೊಳ್ಳಬೇಕಾಗುತ್ತದೆ. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಒದಗಿಸಲು ನಡೆಸಲಾದ ಸಮೀಕ್ಷೆಯ ದತ್ತಾಂಶಗಳನ್ನೂ ಬಳಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.