ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಮೇಲೆ ಒತ್ತಡ ಹಾಕಿರುವುದು ಸರಿಯಲ್ಲ. ಹೀಗೆ ಅಧಿಕಾರ ಹಿಂಪಡೆಯುವುದು ಒಳ್ಳೆಯ ಸಂಪ್ರದಾಯವಲ್ಲ’ ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಅಭಿಪ್ರಾಯಪಟ್ಟರು.
ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಾನು ಅವರ ಮನೆ, ಕಚೇರಿಗೆ ಹೋದವನಲ್ಲ. ಜೈ ವೀರಭದ್ರ ಎದ್ದೇಳು, ರುದ್ರಾ ರೆಡಿಯಾಗಿ ಎಂದು ಧೈರ್ಯ ಹೇಳಲು ಈಗ ಬಂದಿದ್ದೇನೆ. ಸೆಪ್ಟೆಂಬರ್ ನಂತರ ರಾಜಕೀಯದಲ್ಲಿ ಹೊಸ ಬೆಳವಣಿಗೆ ಆಗಲಿದೆ ಕಾದುನೋಡಿ’ ಎಂದು ಭವಿಷ್ಯ ನುಡಿದರು.
‘ಸೆಪ್ಟೆಂಬರ್‌ನಲ್ಲಿ ನಾವು (ಕಾಂಗ್ರೆಸ್) ರಾಜ್ಯದಲ್ಲಿ ಅಲ್ಪಸಂಖ್ಯಾತ ಸಭೆ ಮಾಡುತ್ತೇವೆ. ಜೂನ್, ಜುಲೈ, ಆಗಸ್ಟ್‌ನಲ್ಲಿ ರಾಜಕೀಯ ವಿಕೇಂದ್ರೀಕರಣ ಆಗಲಿದೆ ಎಂದು ಹಿಂದೆಯೇ ಹೇಳಿದ್ದೆ. ಕೇಶವಕೃಪ (ಆರೆಸ್ಸೆಸ್ ಕಚೇರಿ) ಎನ್ನುವುದು ಬಸವ ಕೃಪ ಆಗಿದೆ’ ಎಂದರು.
‘ಯಡಿಯೂರಪ್ಪ ಲವಲವಿಕೆಯಿಂದ ಇದ್ದಾರೆ. ಅವರು ರಾಜ್ಯಪಾಲ ಹುದ್ದೆ ತಿರಸ್ಕರಿಸಿದ್ದಾರೆ. ಕನ್ನಡಿಗರು ನೀಡುವವರು, ಬೇಡುವವರಲ್ಲ. ಅವರ ಮೇಲೆ ಆರೋಪ, ಪ್ರತ್ಯಾರೋಪ ಇರಬಹುದು. ಅದು ಬೇರೆ ವಿಷಯ. ಅಧಿಕಾರ ಇದ್ದಾಗ ನಾನು ದೂರ ಇರುವ ಮನುಷ್ಯ. ರಾಜೀನಾಮೆ ನೀಡಿರುವುದರಿಂದ ಭೇಟಿ ಮಾಡಲು ಬಂದಿದ್ದೇನೆ’ ಎಂದು ಸಮರ್ಥಿಸಿದರು. ಯಡಿಯೂರಪ್ಪ ಬದಲಾವಣೆಯ ಬಗ್ಗೆ ಮಾತನಾಡಿದ ಅವರು, ‘ಒರಿಜಿನಲ್ ಕಾಪಿ ಇಲ್ಲ. ಜೆರಾಕ್ಸ್ ತಗೊಂಡು ಏನು ಮಾಡುವುದು. ಯಡಿಯೂರಪ್ಪ ಅವರನ್ನು ಬಿಟ್ಟು ಮುಖ್ಯಮಂತ್ರಿ ಯಾರೇ ಆಗಲಿ, ನಮ್ಮ ಜನ ಒಪ್ಪಲ್ಲ. ನಾನು ಏನು ಹೇಳಿದರೂ ನಂಬುತ್ತಿರಲಿಲ್ಲ. ಈಗ ನನ್ನ ಅಂದಾಜಿನ ಪ್ರಕಾರವೇ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.