ADVERTISEMENT

ಘಟಿಕೋತ್ಸವಕ್ಕೆ ಹೊಸ ಉಡುಪು, ಪಾಶ್ಚಾತ್ಯ ಶೈಲಿ ರದ್ದು: ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 15:47 IST
Last Updated 23 ಫೆಬ್ರುವರಿ 2026, 15:47 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ವಾರ್ಷಿಕ ಘಟಿಕೋತ್ಸವಗಳಲ್ಲಿ ಇನ್ನು ಮುಂದೆ ಪಾಶ್ಚಾತ್ಯ ಶೈಲಿಯ ಗೌನ್‌ ಮತ್ತು ಟೋಪಿ ಧರಿಸುವ ಪದ್ಧತಿ ರದ್ದಾಗಲಿದೆ. 

ADVERTISEMENT

ಘಟಿಕೋತ್ಸವಗಳಲ್ಲಿ ಭಾರತೀಯ ಪರಂಪರೆ ಬಿಂಬಿಸುವ ಉಡುಪು ಪರಿಚಯಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಖಾದಿ ಒಳಗೊಂಡಂತೆ ಏಕರೂಪದ ಉಡುಗೆಗಳನ್ನು ಆಯ್ಕೆ ಮಾಡಲು ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲು ಮುಂದಾಗಿದೆ.

ಸಮಿತಿ ವರದಿಯ ಆಧಾರದಲ್ಲಿ 2026–27ನೇ ಸಾಲಿನ ಘಟಿಕೋತ್ಸವಗಳಿಂದಲೇ ಹೊಸ ಉಡುಪುಗಳ ನೀತಿ ಜಾರಿಯಾಗಲಿದೆ. ಈ ನಿಯಮವು ಪದವಿ ಪ್ರಮಾಣಪತ್ರ ಸ್ವೀಕರಿಸುವ ವಿದ್ಯಾರ್ಥಿಗಳು, ಸಮಾರಂಭದಲ್ಲಿ ಭಾಗವಹಿಸುವ ಅಧ್ಯಾಪಕರು ಹಾಗೂ ಅತಿಥಿಗಳಿಗೂ ಅನ್ವಯವಾಗಲಿದೆ.

ಘಟಿಕೋತ್ಸವಗಳಲ್ಲಿ ಪ್ರಸ್ತುತ ಬ್ರಿಟಿಷ್‌ ಶೈಲಿಯ ಕಪ್ಪು ಅಥವಾ ಗಾಢ ಬಣ್ಣದ ಗೌನ್‌ ಹಾಗೂ ಸರಳವಾದ ಫಾರ್ಮಲ್ ಉಡುಪು ಧರಿಸಲಾಗುತ್ತಿದೆ. ಕುಲಾಧಿಪತಿ, ಕುಲಪತಿ, ಪ್ರಾಧ್ಯಾಪಕರು ವಿಶೇಷ ಬಣ್ಣದ ಮತ್ತು ಅಲಂಕಾರಿತ ಗೌನ್‌, ಚಿನ್ನದ ಅಥವಾ ಬಣ್ಣದ ಅಂಚುಗಳಿರುವ ಉಡುಪು, ಟೋಪಿ ಧರಿಸುತ್ತಾರೆ. ಪಿಎಚ್‌.ಡಿ ಪದವೀಧರರು ವಿಶೇಷ ಬಣ್ಣದ, ಅಂಚಿನಲ್ಲಿ ಅಲಂಕಾರ ಇರುವ ಡಾಕ್ಟರಲ್‌ ಗೌನ್‌ ಬಳಸುತ್ತಿದ್ದಾರೆ.

‘ಬ್ರಿಟಿಷ್‌ ಕಾಲದ ಗೌನ್‌ ಪದ್ಧತಿಯನ್ನು ರದ್ದುಮಾಡಿ, ಭಾರತೀಯ ಪರಂಪರೆಯ ಉಡುಪಿಗೆ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಸಮಿತಿಯ ಶಿಫಾರಸಿನ ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಬಹುತೇಕ ಖಾದಿ ಉಡುಪು ನಿಗದಿ ಮಾಡುವ ಸಾಧ್ಯತೆ ಇದೆ. ಪಾಶ್ವಾತ್ಯ ಮಾದರಿ ಟೋಪಿ ಬದಲು ಮೈಸೂರು ಪೇಟ ಬಳಸಲು ಒಲವು ವ್ಯಕ್ತವಾಗಿದೆ. ಎಲ್ಲರಿಗೂ ಬಿಳಿ ಬಣ್ಣದ ಅಂಗಿ ಕಡ್ಡಾಯವಾಗಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.