ADVERTISEMENT

‘ಒಕ್ಕೂಟ ವ್ಯವಸ್ಥೆಗೆ ಪೂರಕವಾದ ಶಿಕ್ಷಣ ನೀತಿ ಅಗತ್ಯ’–ಬಿ.ಕೆ.ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 6:06 IST
Last Updated 25 ಆಗಸ್ಟ್ 2021, 6:06 IST
ಬಿ.ಕೆ. ಹರಿಪ್ರಸಾದ್‌
ಬಿ.ಕೆ. ಹರಿಪ್ರಸಾದ್‌   

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನ ವಿರೋಧಿ. ಅಷ್ಟೇ ಅಲ್ಲ, ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆ ವಿರೋಧಿಯೂ ಆಗಿದೆ. ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಬಿಜೆಪಿಯ ಗುಪ್ತ ಕಾರ್ಯಸೂಚಿ ಅನುಷ್ಠಾನದ ಹುನ್ನಾರವಿದು’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಗಂಭೀರ ಆರೋಪ ಮಾಡಿದ್ದಾರೆ.

‘ರಾಜ್ಯ ಸರ್ಕಾರ ಈ ನೀತಿಯ ಅಧ್ಯಯನಕ್ಕೆ ವಿವಿಧ ರಾಜಕೀಯ ಪಕ್ಷಗಳ ಪ‍್ರತಿನಿಧಿಗಳು, ರಾಜ್ಯದ ಶಿಕ್ಷಣ ತಜ್ಞರು, ನಿವೃತ್ತ ಕುಲಪತಿಗಳು, ನಿವೃತ್ತ ಪ್ರಾಧ್ಯಾಕರನ್ನು ಒಳಗೊಂಡ ಸಮಿತಿ ರಚಿಸಬೇಕು. ಅಂತಿಮವಾಗಿ ವಿಕೇಂದ್ರೀಕರಣ ಒಕ್ಕೂಟ ವ್ಯವಸ್ಥೆಗೆ ಪೂರಕವಾದ ರಾಜ್ಯ ಶಿಕ್ಷಣ ನೀತಿ ಜಾರಿಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ

‘ಈ ನೀತಿಯನ್ನು ರೂಪಿಸಿದ ಸಮಿತಿಯಲ್ಲಿ ಸಂಘ ಪರಿವಾರದ ಪ್ರಭಾವವಿದೆ. ಹೀಗಾಗಿ, ಆರೆಸ್ಸೆಸ್ ಕಾರ್ಯಚೂಚಿಯನ್ನು ಈ ನೀತಿಯಲ್ಲಿ ಅಳವಡಿಸಲಾಗಿದೆ’ ಎಂದು ದೂರಿದ ಅವರು, ‘ಒಕ್ಕೂಟ ರಾಜ್ಯಗಳ ಸ್ವಾಯತ್ತತೆಗೆ ನೀತಿ ವಿರುದ್ಧವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರಗಳು ಮತ್ತು ಶಿಕ್ಷಣ ಹಕ್ಕುದಾರರೊಂದಿಗೆ ಸಮಾಲೋಚನೆ ನಡೆಸಿ, ಸಮಾನ ಶಿಕ್ಷಣ ವ್ಯವಸ್ಥೆಯ ಆಶಯಗಳಿಗೆ ಅನುಗುಣವಾಗಿ ರಾಜ್ಯಗಳಿಗೆ ಸಂವಿಧಾನದ ಆಶಯಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ರೂಪಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.