ADVERTISEMENT

ಬಡಾವಣೆ ನಿರ್ಮಾಣಕ್ಕೆ ಹೊಸ ಕಾನೂನು: ಸ್ಥಳೀಯ ಸಂಸ್ಥೆಗಳ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 14:19 IST
Last Updated 17 ಡಿಸೆಂಬರ್ 2024, 14:19 IST
ರಿಜ್ವಾನ್‌ ಅರ್ಷದ್‌
ರಿಜ್ವಾನ್‌ ಅರ್ಷದ್‌   

ಸುವರ್ಣ ವಿಧಾನಸೌಧ (ಬೆಂಗಳೂರು): ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ಕೆಲ ತಿದ್ದುಪಡಿ ಒಳಗೊಂಡ ಹೊಸ ಕಾನೂನು ಜಾರಿಗೆ ತರಬೇಕು ಎಂದು ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ ಶಿಫಾರಸು ಮಾಡಿದೆ.

ಸರ್ಕಾರ ಅಥವಾ ಖಾಸಗಿಯವರು ನಿರ್ಮಿಸುವ ಯಾವುದೇ ಬಡಾವಣೆಯಲ್ಲಿ ಮನೆ ನೀರಿನ ಸಂಪರ್ಕ, ವಿದ್ಯುತ್‌, ಒಎಫ್‌ಸಿ ಅಳವಡಿಕೆಗೆ ರಸ್ತೆಗಳ ಎರಡೂ ಬದಿ ಪೈಪ್‌ಲೈನ್‌ ಮಾಡಿ ಕೇಬಲ್‌ಗಳನ್ನು ಅಳವಡಿಸಬೇಕು ಎಂದು ರಿಜ್ವಾನ್‌ ಅರ್ಷದ್ ಅಧ್ಯಕ್ಷತೆಯ ಸಮಿತಿ ಹೇಳಿದೆ.

ಇದುವರೆಗೂ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ರಸ್ತೆಯ ಒಂದು ಬದಿ ಮಾತ್ರ ವ್ಯವಸ್ಥೆ ಇರುತ್ತದೆ. ಇನ್ನೊಂದು ಬದಿಯ ಮನೆಗಳಿಗೆ ಸಂಪರ್ಕ ಕಲ್ಪಿಸುವಾಗ ರಸ್ತೆಯನ್ನು ಅಗೆಯಲಾಗುತ್ತಿತ್ತು. ಇದರಿಂದ ರಸ್ತೆಗಳು ಬೇಗನೆ ಹಾಳಾಗುತ್ತಿದ್ದವು. ಬೆಂಗಳೂರಿನಲ್ಲಿ ಇಂತಹ ಹಾಳಾದ ಕೇಬಲ್‌ಗಳನ್ನು ದುರಸ್ತಿ ಮಾಡಲು ರಸ್ತೆ ಅಗೆದ ಪರಿಣಾಮ ವಿವಿಧ ಇಲಾಖೆಗಳು ದುರಸ್ತಿಗಾಗಿ ₹18.38 ಕೋಟಿ ವೆಚ್ಚ ಮಾಡಿವೆ. ಇಂತಹ ಲೋಪಗಳನ್ನು ಸರಿಪಡಿಸಲು ರಸ್ತೆಯ ಎರಡೂ ಬದಿಯಲ್ಲಿ ನೀರು, ವಿದ್ಯುತ್‌, ಒಎಫ್‌ಸಿ ಕೇಬಲ್‌ಗಳನ್ನು ಅಳವಡಿಸುವ ಅಗತ್ಯವಿದೆ ಎಂದು ತನ್ನ ವರದಿಯಲ್ಲಿ ಸಮಿತಿ ವಿವರಿಸಿದೆ.

ADVERTISEMENT

ರಸ್ತೆಗಳನ್ನು ಅಗೆಯಲು ನಿಯಮದಂತೆ ಅನುಮತಿ ಪಡೆಯದೇ ಇರುವುದು, ಅಗೆದ ರಸ್ತೆಗಳನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯ ತೋರುವ ಘಟನೆಗಳಿಂದ ಅಪಘಾತ, ಸಾವುನೋವುಗಳೂ ವರದಿಯಾಗಿವೆ. ಇಂತಹ ಪ್ರಕರಣಗಳಲ್ಲಿ ಸರ್ಕಾರಕ್ಕೂ ಆರ್ಥಿಕ ನಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.