ADVERTISEMENT

ಹೊಸ ಪಡಿತರ ಚೀಟಿ ಶೀಘ್ರ: ಪ್ರಸ್ತಾವ ಮಂಡಿಸಲು ಮುಂದಾದ ಆಹಾರ ಇಲಾಖೆ

ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವ ಮಂಡಿಸಲು ಮುಂದಾದ ಆಹಾರ ಇಲಾಖೆ

ರಾಜೇಶ್ ರೈ ಚಟ್ಲ
Published 4 ಮೇ 2025, 23:32 IST
Last Updated 4 ಮೇ 2025, 23:32 IST
<div class="paragraphs"><p>ಕೆ.ಎಚ್‌. ಮುನಿಯಪ್ಪ</p></div>

ಕೆ.ಎಚ್‌. ಮುನಿಯಪ್ಪ

   

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್‌ (ಆದ್ಯತಾ ಕುಟುಂಬ), ಎಪಿಎಲ್ (ಆದ್ಯತೆಯೇತರ ಕುಟುಂಬ) ಪಡಿತರ ಚೀಟಿಗಳನ್ನು ವಿತರಿಸಲು ಆಹಾರ ಇಲಾಖೆ ಮುಂದಾಗಿದೆ.

ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲು ಅನುಮತಿ ನೀಡುವ ಸಂಬಂಧ ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವ ಮಂಡಿಸಲು ಕ್ರಮ ತೆಗೆದುಕೊಳ್ಳುವಂತೆ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ADVERTISEMENT

ಹೊಸದಾಗಿ ಪಡಿತರ ಚೀಟಿ ಕೋರಿ 2023–24ರಲ್ಲಿ 2,95,986 ಮತ್ತು 2024–25ರಲ್ಲಿ 97,464 ಸೇರಿ ಒಟ್ಟು 3,93,450 ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ಪೈಕಿ 3,05,325 ಅರ್ಹ ಅರ್ಜಿಗಳಿದ್ದವು. ಅವುಗಳಲ್ಲಿ ‘ಇ–ಶ್ರಮ್’ ನೋಂದಾಯಿತ 8,766 ಮತ್ತು ಅರಣ್ಯವಾಸಿಗಳಿಗೆ ವಿತರಿಸಿದ 573 ಕಾರ್ಡ್ ಸೇರಿ ಒಟ್ಟು 2,04,760 ಅರ್ಜಿಗಳಿಗೆ ಇಲಾಖೆಯು ಹೊಸ ಕಾರ್ಡ್‌ಗಳನ್ನು ವಿತರಿಸಿದೆ. 88,125 ಅರ್ಜಿಗಳು ತಿರಸ್ಕೃತಗೊಂಡಿವೆ. ವಿವಿಧ ಕಾರಣಗಳಿಗೆ 1,00,565 ಅರ್ಜಿಗಳಿಗೆ ಕಾರ್ಡ್‌ ವಿತರಣೆ ಬಾಕಿ ಇದೆ.

ಕೇಂದ್ರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಪ್ರಕಾರ ರಾಜ್ಯದಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್‌ ಕಾರ್ಡ್‌ ಸೇರಿ ಫಲಾನುಭವಿಗಳ ಮಿತಿಯನ್ನು 4.02 ಕೋಟಿಗೆ ನಿಗದಿಪಡಿಸಿದೆ. ನಗರ ಪ್ರದೇಶದಲ್ಲಿ ಶೇ 50 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 75ರಷ್ಟು ಎಎವೈ ಮತ್ತು ಬಿಪಿಎಲ್‌ ಕಾರ್ಡ್‌ ವಿತರಿಸಲು ಕಾಯ್ದೆಯಡಿ ಅವಕಾಶವಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಶೇ 65.96ರಷ್ಟು ಬಿಪಿಎಲ್ ಫಲಾನುಭವಿಗಳಿದ್ದಾರೆ.

ಕಾರ್ಡ್‌ಗಳಲ್ಲಿ ಹೆಸರು ಇರುವ ಪ್ರತಿ ಫಲಾನುಭವಿಗೆ 5 ಕಿಲೋ ಅಕ್ಕಿಯನ್ನು ಕೇಂದ್ರ ಸರ್ಕಾರವು ಎನ್‌ಎಫ್‌ಎಸ್‌ಎ ಅಡಿ ಉಚಿತವಾಗಿ ನೀಡುತ್ತಿದೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕಿಲೋ ಅಕ್ಕಿ ವಿತರಿಸುತ್ತಿದ್ದು, ಇದಕ್ಕಾಗಿ ಕಿಲೋಗೆ ₹22.50 ದರದಲ್ಲಿ ಆಹಾರ ನಿಗಮದಿಂದ ಖರೀದಿಸಿ ವಿತರಿಸುತ್ತಿದೆ. ಅಲ್ಲದೆ, ರಾಜ್ಯಸರ್ಕಾರ ಹೆಚ್ಚುವರಿಯಾಗಿ 17,48,989 ಬಿಪಿಎಲ್‌ ಕಾರ್ಡ್‌ಗಳ 49,67,187 ಫಲಾನುಭವಿಗಳಿಗೆ  ‘ಅನ್ನಭಾಗ್ಯ’ ಯೋಜನೆಯಡಿ 10 ಕಿಲೋ ಅಕ್ಕಿ ವಿತರಿಸುತ್ತಿದ್ದು ಇದರ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ.

ಆರ್ಥಿಕ ಇಲಾಖೆ ಷರತ್ತು

ಹೊಸ ಪಡಿತರ ಚೀಟಿ ವಿತರಿಸಲು ಅರ್ಜಿ ಆಹ್ವಾನಿಸಲು ಷರತ್ತು ವಿಧಿಸಿ ಆರ್ಥಿಕ ಇಲಾಖೆ 2023ರ ಸೆ. 16ರಂದು ಆದೇಶ ಹೊರಡಿಸಿತ್ತು. ಅಲ್ಲದೆ, ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ರದ್ದು ಮಾಡಿದ ಕಾರ್ಡ್‌ಗಳ ಸಂಖ್ಯೆಗೆ ಅನುಗುಣವಾಗಿ ಹೊಸದಾಗಿ ಪಡಿತರ ಚೀಟಿ ವಿತರಿಸುವಂತೆ ಸೂಚನೆ ನೀಡಿತ್ತು.

ಅದರಂತೆ, 2024–25ನೇ ಸಾಲಿನಲ್ಲಿ 3,81,983 ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಿ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿತ್ತು. ಹೀಗೆ ವರ್ಗಾವಣೆಯಾದ ಸಂಖ್ಯೆಗೆ ಅನುಗುಣವಾಗಿ ಹೊಸ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆದರೆ, ಕಾರ್ಡ್ ರದ್ದತಿಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾದ ಕಾರಣ ಆದಾಯ ತೆರಿಗೆ ಪಾವತಿದಾರರಾದ 55,713 ಹಾಗೂ ಸರ್ಕಾರಿ ನೌಕರರು ಹೊಂದಿದ್ದ 2,300 ಬಿಪಿಎಲ್‌ ಕಾರ್ಡ್‌ಗಳನ್ನು ಹೊರತುಪಡಿಸಿ, ಉಳಿದಂತೆ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆಗೊಂಡಿದ್ದ 3,23,970 ಕಾರ್ಡ್‌ಗಳನ್ನು ಮತ್ತೆ ಬಿ‍ಪಿಎಲ್‌ ಕಾರ್ಡ್‌ಗಳಾಗಿ ಆಹಾರ ಇಲಾಖೆ ಪರಿವರ್ತಿಸಿತ್ತು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಪಡಿತರ ಚೀಟಿ ನೀಡಲು ಅರ್ಜಿ ಆಹ್ವಾನಿಸಿಲ್ಲ. ಹೊಸತಾಗಿ ಪಡಿತರ ಚೀಟಿ ವಿತರಣೆಗೆ ಅರ್ಜಿ ಆಹ್ವಾನಿಸಲು ವಿಧಾನಮಂಡಲದ ಕಳೆದ ಎರಡು–ಮೂರು ಅಧಿವೇಶನಗಳಲ್ಲಿ ಸಚಿವರು, ಶಾಸಕರು ಒತ್ತಾಯಿಸಿದ್ದರು. ಸಾರ್ವಜನಿಕರಿಂದಲೂ ಒತ್ತಡ ಹೆಚ್ಚಿದೆ. ಹೀಗಾಗಿ, ಆರ್ಥಿಕ ಇಲಾಖೆಯು ವಿಧಿಸಿರುವ ಷರತ್ತುಗಳನ್ನು ಸಡಿಲಿಸಿ ಬಿಪಿಎಲ್‌, ಎಪಿಎಲ್‌ ಪಡಿತರ ಚೀಟಿ ನೀಡಲು ಅರ್ಜಿ ಆಹ್ವಾನಿಸಲು ಸಚಿವ ಸಂಪುಟ ಸಭೆಯ ಅನುಮೋದನೆ ಪಡೆಯಲು ಕ್ರಮ ತೆಗೆದುಕೊಳ್ಳಬೇಕಾಗಿದೆ’ ಎಂದು ಕಾರ್ಯದರ್ಶಿಗೆ ಬರೆದ ಟಿಪ್ಪಣಿಯಲ್ಲಿ ಮುನಿಯಪ್ಪ ಉಲ್ಲೇಖಿಸಿದ್ದಾರೆ.

ಹೊಸ ಪಡಿತರ ಚೀಟಿ ಸಚಿವರ ಸಮರ್ಥನೆ

l ಕುಟುಂಬಗಳು ವಿಭಜನೆಯಾದಾಗ ಹೊಸ ಪಡಿತರ ಚೀಟಿ ನೀಡುವುದು ಅತ್ಯವಶ್ಯ. ಈ ರೀತಿ ಹೊಸ ಪಡಿತರ ಚೀಟಿ ನೀಡಿದರೆ ಕಾರ್ಡ್‌ಗಳ ಸ‌ಂಖ್ಯೆ ಹೆಚ್ಚಬಹುದು. ಫಲಾನುಭವಿಗಳ ಸಂಖ್ಯೆ ಹೆಚ್ಚಾಗುವುದಿಲ್ಲ. ಇದರಿಂದ ಆರ್ಥಿಕ ಹೊರೆ ಉದ್ಭವಿಸುವುದಿಲ್ಲ

l ಕೇಂದ್ರ ಸರ್ಕಾರ 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಬಿಪಿಎಲ್‌ ಪಡಿತರ ಕಾರ್ಡ್‌ ಫಲಾನುಭವಿಗಳ ಗರಿಷ್ಠ ಮಿತಿಯನ್ನು 4.02 ಕೋಟಿ ಎಂದು ನಿಗದಿಪಡಿಸಿದೆ. ಪ್ರಸ್ತುತ 2025ರ ಜನಸಂಖ್ಯೆಗೆ ಅನುಗುಣವಾಗಿ ಫಲಾನುಭವಿಗಳ ಮಿತಿಯನ್ನು 4.60 ಕೋಟಿಗೆ ಹೆಚ್ಚಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ

l ಲೈಂಗಿಕ ಅಲ್ಪಸಂಖ್ಯಾತರು, ಕೊಳೆಗೇರಿ ನಿವಾಸಿಗಳು, ಸಫಾಯಿ ಕರ್ಮಚಾರಿಗಳು, ತುರ್ತು ವೈದ್ಯಕೀಯ ಹಾಗೂ ಅರ್ಹ ಬಿಪಿಎಲ್‌ ಕುಟುಂಬ-
ಗಳು ಪಡಿತರ ಚೀಟಿ ಇಲ್ಲದೆ ವಿವಿಧ ಸವಲತ್ತುಗಳಿಂದ ವಂಚಿತರಾಗಿದ್ದಾರೆ

l ಎಪಿಎಲ್‌ ಕಾರ್ಡ್‌ದಾರರಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಿಸುವುದಿಲ್ಲ. ಹೀಗಾಗಿ, ಹೊಸದಾಗಿ ಎಪಿಎಲ್‌ ಕಾರ್ಡ್ ನೀಡಲು ಅರ್ಜಿ ಆಹ್ವಾನಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.