ADVERTISEMENT

ಒಂದೇ ದಿನದಲ್ಲಿ ಭೂ ಪರಿವರ್ತನೆಗೆ ಯೋಜನೆ: ಕಂದಾಯ ಸಚಿವ ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 21:14 IST
Last Updated 8 ಡಿಸೆಂಬರ್ 2021, 21:14 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ಅರ್ಜಿ ಸಲ್ಲಿಸಿದ ಒಂದು ದಿನದಲ್ಲೇ ಭೂ ಪರಿವರ್ತನೆ ಪ್ರಕ್ರಿಯೆ ಯನ್ನು ಪೂರ್ಣಗೊಳಿಸಿ, ಆದೇಶ ಹೊರಡಿಸಲು ಅವಕಾಶ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಜಮೀನು ಖರೀದಿಸಿದವರು ಅನ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಲು ಅರ್ಜಿ ಸಲ್ಲಿಸಿ ಆರು ತಿಂಗಳವರೆಗೂ ಕಾಯಬೇಕಾಗಿತ್ತು. ಇದರಿಂದ ಖರೀದಿದಾರರು, ಹೂಡಿಕೆ ದಾರರಿಗೆ ವಿಪರೀತ ಸಮಸ್ಯೆಗಳಾಗುತ್ತಿದ್ದವು. ಅದನ್ನು ತಪ್ಪಿಸಲು ಹೊಸ ನಿಯಮ ಜಾರಿಗೆ ತರಲಾಗುವುದು’ ಎಂದರು.

ಭೂ ಪರಿವರ್ತನೆಯ ನಿಯಮಗಳಲ್ಲಿ ಇರುವ ತೊಡಕುಗಳಿಂದ ಪ್ರತಿ ಎಕರೆಗೆ ₹ 5 ಲಕ್ಷದವರೆಗೂ ಅಧಿಕಾರಿಗಳಿಗೆ ಪಾವತಿಸಬೇಕಾದ ಸ್ಥಿತಿ ಇದೆ. ಇದರಿಂದ ವರ್ಷಕ್ಕೆ ₹ 500 ಕೋಟಿಯಷ್ಟು ಒಳ ವ್ಯವಹಾರ ನಡೆಯುತ್ತಿತ್ತು. ಹೊಸ ನಿಯಮ ಜಾರಿಯಿಂದ ಭೂ
ಪರಿವರ್ತನೆಯಲ್ಲಿ ವಿಳಂಬ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ’ ಎಂದು ಹೇಳಿದರು.

ADVERTISEMENT

ಪರಿವರ್ತನೆಗೆ ಉದ್ದೇಶಿಸಿರುವ ಜಮೀನು ಒತ್ತುವರಿಯಲ್ಲಿ ಸೇರಿರ ಬಾರದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳಿಗೆ ಸೇರಿದ್ದಾಗಿರ
ಬಾರದು ಎಂಬುದೂ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗುವುದು. ಅವುಗಳಿಂದ ಹೊರತಾದ ಎಲ್ಲ ಜಮೀನುಗಳಿಗೂ ಒಂದೇ ದಿನದಲ್ಲಿ ಭೂಪರಿವರ್ತನೆ ಆದೇಶ ನೀಡಲು ಹೊಸ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.