ಸಮಾರಂಭದಲ್ಲಿ 14 ವೈದ್ಯರಿಗೆ ‘ವೈದ್ಯರ ದಿನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಐಎಂಎ ಕರ್ನಾಟಕ ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಹೊಸ ವೈದ್ಯಕೀಯ ಸಂಸ್ಥೆಗಳ ಆರಂಭಕ್ಕೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ಪರವಾನಗಿ ವಿಳಂಬ ತಪ್ಪಿಸಲು ಹೊಸ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯರ ದಿನ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.
‘ಸದ್ಯ ಜಾರಿಯಲ್ಲಿರುವ ವ್ಯವಸ್ಥೆಯಡಿ ಕೆಪಿಎಂಇ ನೋಂದಣಿ ಆಗದೆ ಹೊಸ ವೈದ್ಯಕೀಯ ಸಂಸ್ಥೆ, ನರ್ಸಿಂಗ್ ಹೋಂ, ಆಸ್ಪತ್ರೆ ಪ್ರಾರಂಭಿಸಲು ಸಾಧ್ಯವಿಲ್ಲ. ಕೆಪಿಎಂಇ ಅಡಿ ಪರಿಶೀಲನೆ ನಡೆಸಿ, ಪರವಾನಗಿ ಒದಗಿಸುವುದು ವಿಳಂಬವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಇಲಾಖೆಯಿಂದ ಮೊದಲೇ ನೋಂದಣಿ ನೀಡಲಾಗುವುದು. ಬಳಿಕ ಆರು ತಿಂಗಳಿಂದ ಒಂದು ವರ್ಷದವರೆಗೆ ಪರವಾನಗಿ ಪಡೆಯಲು ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆ ನಡುವೆ ಸಂಸ್ಥೆ ಆರಂಭಿಸಬಹುದು. ಬಳಿಕ ಶಾಶ್ವತ ನೋಂದಣಿ ಮಾಡಿಕೊಡುತ್ತೇವೆ. ಈ ಬಗ್ಗೆ ಕ್ರಮವಹಿಸಲಾಗಿದೆ’ ಎಂದರು.
‘ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ವಿಚಾರದಲ್ಲಿರುವ ಕಠಿಣ ನಿಯಮಾವಳಿಯನ್ನು ಸರಳೀಕರಿಸಲು ಸರ್ಕಾರ ಕ್ರಮ ವಹಿಸಲಿದೆ. ವೈದ್ಯಕೀಯ ದೌರ್ಜನ್ಯ ತಡೆಗೆ, ಸಾಮಾಜಿಕ ಜಾಲತಾಣದ ಮೂಲಕ ವೈದ್ಯರ ನಿಂದನೆ ತಡೆಗೆ ಈಗಾಗಲೇ ಜೈಲು ಶಿಕ್ಷೆ, ದಂಡ ಹೆಚ್ಚಿಸಲಾಗಿದೆ’ ಎಂದು ಹೇಳಿದರು.
ರಾಜ್ಯ ಕಾನೂನು ಆಯೋಗ ಅಧ್ಯಕ್ಷ ನ್ಯಾ. ಅಶೋಕ್ ಬಿ. ಹಿಂಚಿಗೇರಿ, ‘ವೈದ್ಯಕೀಯ ವೃತ್ತಿಯು ವೈಯಕ್ತಿಕ ಬದುಕನ್ನು ಸಾಕಷ್ಟು ತ್ಯಾಗ ಮಾಡಿಸುವ ವೃತ್ತಿಯಾಗಿದೆ. ದೈಹಿಕ, ಮಾನಸಿಕ ಒತ್ತಡಗಳಿಂದ ವೈದ್ಯರ ಆಯಸ್ಸು ಕಡಿಮೆ ಆಗುತ್ತಿದೆ. ಭಾರತೀಯ ವೈದ್ಯಕೀಯ ಸಂಸ್ಥೆಯ ಸಮೀಕ್ಷೆ ಪ್ರಕಾರ ಶೇ 75 ರಷ್ಟು ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. ಇದನ್ನು ಸರ್ಕಾರ ತಡೆಯಬೇಕು’ ಎಂದು ಹೇಳಿದರು.
ಐಎಂಎ ರಾಜ್ಯ ಶಾಖೆ ಅಧ್ಯಕ್ಷ ಡಾ.ವಿ.ವಿ.ಚಿನಿವಾಲರ, ‘ರಾಜ್ಯದಲ್ಲಿ ವೈದ್ಯರ ಮೇಲಿನ ದೌರ್ಜನ್ಯಗಳು ಕಡಿಮೆ ಆಗಿಲ್ಲ. ನಕಲಿ ವೈದ್ಯರ ಹಾವಳಿಯೂ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕು. ಸರ್ಕಾರ ಸಣ್ಣ, ಮಧ್ಯಮ ಚಿಕಿತ್ಸಾಲಯಗಳಿಗೆ ಪ್ರತ್ಯೇಕವಾದ ನಿಯಮಾವಳಿ ರೂಪಿಸಬೇಕು’ ಎಂದು ಆಗ್ರಹಿಸಿದರು.
ಸಮಾರಂಭದಲ್ಲಿ ಡಾ. ಅನುಪಮಾ ಎಚ್.ಎಸ್. (ಹೊನ್ನಾವರ) ಡಾ. ಬಸವರಾಜ್ ವಿ. ಕಂಬಲ್ಯಾಳ್ (ರೋಣ) ಡಾ. ಚನ್ನಬಸಪ್ಪ ಬವಲಿಂಗಪ್ಪ ನಾವಡಗಿ (ಸವದತ್ತಿ) ಡಾ. ಗೋಪಾಲಕೃಷ್ಣ ಗುಪ್ತ (ಮಂಡ್ಯ) ಡಾ.ಎಚ್.ಆರ್. ಮಹೇಶ್ವರಪ್ಪ (ಬೆಂಗಳೂರು) ಡಾ.ಕೆ.ಎಂ. ನಾಯಕ್ (ರಾಯಚೂರು) ಡಾ.ಕೆ. ರಾಮಚಂದ್ರ ಕಾಮತ್ (ಮಂಗಳೂರು) ಡಾ.ಎಚ್. ನಾಗರಾಜ್ (ಶಿವಮೊಗ್ಗ) ಡಾ.ಎಚ್.ಎಲ್. ಪ್ರೇಮಲತಾ (ಹಾಸನ) ಡಾ. ರಾಜೇಂದ್ರ ಕುಮಾರ್ (ಕೆಜಿಎಫ್) ಡಾ.ಜೆ. ಶರಣಪ್ಪ (ಬೆಂಗಳೂರು) ಡಾ. ವನಮಾಲಾ ವಿ. ಹೆಸರೂರು (ಲಿಂಗಸುಗೂರು) ಡಾ. ವೀಣಾ ಭಟ್ (ಭದ್ರಾವತಿ) ಹಾಗೂ ಡಾ.ವೈ. ಪರ್ವತ ರೆಡ್ಡಿ (ಬಳ್ಳಾರಿ) ಅವರಿಗೆ ಐಎಂಎ ಕರ್ನಾಟಕ ಶಾಖೆ ವತಿಯಿಂದ ‘ವೈದ್ಯರ ದಿನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.