ADVERTISEMENT

ಘೋಷಣೆಯಲ್ಲಷ್ಟೇ ಹೊಸ ತಾಲ್ಲೂಕು ಪಂಚಾಯಿತಿಗಳು!

ಗರಂ ಆದ ಸರ್ಕಾರ: ಕ್ರಮಕ್ಕೆ ಸಿಇಒಗಳಿಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 9:29 IST
Last Updated 20 ಜನವರಿ 2020, 9:29 IST
ಡಾ.ಕೆ.ವಿ. ರಾಜೇಂದ್ರ
ಡಾ.ಕೆ.ವಿ. ರಾಜೇಂದ್ರ   

ಬೆಳಗಾವಿ: ಜಿಲ್ಲೆಯ ಮೂಡಲಗಿ, ನಿಪ್ಪಾಣಿ ಹಾಗೂ ಕಾಗವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸದಾಗಿ ರಚಿಸಲಾಗಿರುವ 50 ತಾಲ್ಲೂಕುಗಳಲ್ಲಿ ತಾಲ್ಲೂಕು ಪಂಚಾಯಿತಿಗಳ ಕಚೇರಿಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ.

ಈಚೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒಗಳು ವೈಯಕ್ತಿಕವಾಗಿ ಗಮನಹರಿಸಿ, ತಾಲ್ಲೂಕು ಪಂಚಾಯಿತಿಗಳು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

2017–18ನೇ ಸಾಲಿನಲ್ಲಿ ಹೊಸ ತಾಲ್ಲೂಕುಗಳನ್ನು ಘೋಷಿಸಲಾಗಿತ್ತು. 2018ರ ಜ.1ರಿಂದಲೇ ಅವುಗಳು ಕಾರ್ಯಾರಂಭ ಮಾಡಲಿವೆ ಎಂದು ಸರ್ಕಾರ ತಿಳಿಸಿತ್ತು. ಆದರೆ, ಎರಡು ವರ್ಷಗಳೇ ಕಳೆದಿದ್ದರೂ ಅನುಷ್ಠಾನವಾಗಿಲ್ಲ. ಹೀಗಾಗಿ, ಆ ಭಾಗದ ಜನರು ಕೆಲಸ ಕಾರ್ಯಗಳಿಗಾಗಿ ಮೂಲ ತಾಲ್ಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಿಲ್ಲ.

ADVERTISEMENT

ಕಾಗದದಲ್ಲೇ ಇದೆ:ಗೋಕಾಕದಿಂದ ಬೇರ್ಪಡಿಸಿ ಮೂಡಲಗಿ, ಚಿಕ್ಕೋಡಿಯಿಂದ ವಿಭಜಿಸಿ ನಿಪ್ಪಾಣಿ ಹಾಗೂ ಅಥಣಿಯಿಂದ ಬೇರ್ಪಡಿಸಿ ಕಾಗವಾಡ ತಾಲ್ಲೂಕು ರಚಿಸಲಾಗಿದೆ. ಮೂಡಲಗಿ, ನಿಪ್ಪಾಣಿ ಹಾಗೂ ಕಾಗವಾಡ ಕೇಂದ್ರ ಸ್ಥಾನಗಳಾಗಿ ಕಾರ್ಯನಿರ್ವಹಿಸಲಿವೆ. ಇವುಗಳ ವ್ಯಾಪ್ತಿ ನಿಗದಿಪಡಿಸಿ, ಹಳ್ಳಿಗಳನ್ನು ಹಂಚಿಕೆ ಮಾಡಿ 14.10.2019ರಂದು ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದೆ. ಬಳಿಕ ಕಚೇರಿಗಳ ಆರಂಭದ ವಿಷಯದಲ್ಲಿ ತ್ವರಿತವಾದ ಕ್ರಮಗಳು ನಡೆದಿಲ್ಲ. ಪರಿಣಾಮ, ಹೊಸ ತಾಲ್ಲೂಕು ಪಂಚಾಯಿತಿಗಳು ಘೋಷಣೆಯಲ್ಲಿ ಹಾಗೂ ಕಾಗದದಲ್ಲಷ್ಟೇ ಉಳಿದಿವೆ.

ಅನುದಾನ ವಿಭಜಿಸಿಲ್ಲ:ಮೂಲ ಹಾಗೂ ಹೊಸ ತಾಲ್ಲೂಕು ಪಂಚಾಯಿತಿಗೆ ಅನುದಾನ ವಿಭಜಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕೂಡಲೇ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಇವೆಲ್ಲ ಪ್ರಕ್ರಿಯೆ ನೋಡಿಕೊಳ್ಳಲು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಬೇಕು ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ‘ಮೂಲ ತಾಲ್ಲೂಕು ಪಂಚಾಯಿತಿ ಇಒಗಳಿಗೆ ಪ್ರಭಾರ ವಹಿಸಲಾಗಿದೆ. ಆದರೆ, ಅನುದಾನ ತೆಗೆದುಕೊಳ್ಳುವುದು ಹಾಗೂ ಖರ್ಚು ಮಾಡುವುದಕ್ಕೆ ಸಹಿ ಮಾಡುವುದಕ್ಕಾಗಿ ಅಧಿಕೃತ ಅಧಿಕಾರಿಗೆ ಡಿಡಿಒ ಕೋಡ್‌ ಬೇಕಾಗುತ್ತದೆ. ಇಒ‌ ನೇಮಕವಾಗದೇ ಕೋಡ್ ಸಿಗುವುದಿಲ್ಲ. ಇದು ಕಾರ್ಯನಿರ್ವಹಣೆಗೆ ತೊಡಕಾಗಿದೆ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ. ಮುಂದಿನ ಆರ್ಥಿಕ ವರ್ಷದಿಂದ ಹೊಸ ತಾಲ್ಲೂಕು ಪಂಚಾಯಿತಿಗಳು ಸರ್ವ ರೀತಿಯಲ್ಲೂ ಸಜ್ಜಾಗಿ ಕಾರ್ಯಾರಂಭ ಮಾಡಲಿವೆ. ಆ ಭಾಗದ ಜನರಿಗೆ ಸೇವೆ ಒದಗಿಸಲಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.