ADVERTISEMENT

ಹೊಸ ಪ್ರವಾಸೋದ್ಯಮ ನೀತಿ ಮುಂದಿನ ತಿಂಗಳು ಜಾರಿ: ಸಿ.ಟಿ. ರವಿ

ವರ್ಷದ ಸಾಧನೆ ಮುಂದಿಟ್ಟ ಸಚಿವರು​

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 10:58 IST
Last Updated 27 ಆಗಸ್ಟ್ 2020, 10:58 IST
   

ಬೆಂಗಳೂರು: ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ರಾಜ್ಯದ ಪ್ರವಾಸಿತಾಣಗಳಿಗೆ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ, ಮುಂದಿನ ಮೂರು ವರ್ಷದೊಳಗೆ ದೇಶದಲ್ಲೇ ಕರ್ನಾಟಕ ಪ್ರವಾಸದ್ಯೋಮವನ್ನು ಮೊದಲ ಮೂರು ಸ್ಥಾನದೊಳಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಹಾಗೂ ಯುವ ಸಬಲೀಕರಣ ಸಚಿವ ಸಿ.ಟಿ ರವಿ ಘೋಷಿಸಿದ್ದಾರೆ.

2020-25ರ ಪ್ರವಾಸೋದ್ಯಮ ನೀತಿಯೂ ಮುಂದಿನ ತಿಂಗಳು ಜಾರಿಗೆ ಬರಲಿದ್ದು, ಸ್ಥಳೀಯರಿಗೆ ಉದ್ಯೋಗ, ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ದಿ, ಮೂಲಭೂತಸೌಕರ್ಯಗಳಿಗೆ ಒತ್ತು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಯುವಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಸಚಿವರಾಗಿ ಒಂದು ವರ್ಷದಲ್ಲಿ ಮಾಡಿರುವ ಸಾಧನೆಗಳು ಹಾಗೂ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಸಿ.ಟಿ.ರವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ADVERTISEMENT

ಸಚಿವನಾಗಿ ಅಧಿಕಾರ ಸ್ವೀಕರಿಸಿದ 83 ದಿನಗಳಲ್ಲಿಯೇ ರಾಜ್ಯದ ಎಲ್ಲಾ 30 ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಇಲಾಖೆಯ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಅನುಷ್ಟಾನಗೊಳಿಸಲು ಸೂಚಿಸಿದ ಪರಿಣಾಮ ಇಂದು ನಮ್ಮ ಸಾಧನೆಗಳ ಪ್ರತಿಫಲನ ಗೋಚರವಾಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳನ್ನು ಗುರುತಿಸಿ, ಅವುಗಳನ್ನು ಸರ್ವರೀತಿಯಿಂದಲೂ ವಿಶ್ವ ಪ್ರವಾಸೋದ್ಯಮ ಗುಣಮಟ್ಟಕ್ಕೆ ಏರಿಸಲಾಗುವುದು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಬಹುದು. ಇದಕ್ಕೆ ಪೂರಕವಾಗಿ ಸ್ಥಳೀಯ ಮಟ್ಟದಲ್ಲಿ ಕೌಶಲ ಅಭಿವೃದ್ಧಿ, ಸ್ಥಳೀಯ ಆಹಾರ ಪದ್ಧತಿಯನ್ನು ಹೊರ ಜಗತ್ತಿಗೆ ಪರಿಚಯಿಸಲಾಗುವುದು. ಪ್ರಾದೇಶಿಕ ಮಟ್ಟದಲ್ಲಿ ಆಹಾರ ಮೇಳಗಳನ್ನು ನಡೆಸಿ, ಆಹಾರ ಪ್ರಿಯರನ್ನೂ ಸೆಳೆಯುವ ಮೂಲಕ ಖಾದ್ಯಗಳ ಪ್ರವಾಸೋದ್ಯಮ ಬೆಳೆಸಲು ಅವಕಾಶವಿದೆ. ಹೀಗೆ ಹಲವು ಬಗೆಯ ಪ್ರವಾಸೋದ್ಯಮ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಹೊಸ ಪ್ರವಾಸೋದ್ಯಮ ನೀತಿ ಮುಂದಿನ ತಿಂಗಳುಜಾರಿಗೆ ಬರಲಿದೆ ಎಂದರು.

ಕರ್ನಾಟಕವು ಪ್ರವಾಸಿಗರ ಸ್ವರ್ಗವಾಗಿದ್ದು, ವರ್ಷದಿಂದ ವರ್ಷಕ್ಕೆ ದೇಶಿ- ವಿದೇಶಿಯ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ಕರ್ನಾಟಕದಲ್ಲಿ ಈವರೆಗೆ 319 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಆ ಪೈಕಿ ಪ್ರಮುಖವಾಗಿರುವ 20 ವಿಶ್ವವಿಖ್ಯಾತ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಈ ಬಾರಿ ಕೋವಿಡ್‍ನಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಹಿನ್ನಡೆ ಉಂಟಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. 2006ರಲ್ಲಿ ಕರ್ನಾಟಕಕ್ಕೆ 36.7 ದಶಲಕ್ಷ ದೇಶಿ ಪ್ರವಾಸಿಗರು ಆಗಮಿಸಿದ್ದರೆ, 2018ರಲ್ಲಿ 215.03 ದಶಲಕ್ಷಕ್ಕೆ ಏರಿಕೆಯಾಗಿದೆ. ಪ್ರವಾಸಿ ತಾಣಗಳಲ್ಲಿರುವ ಆಹ್ಲಾದಕರವಾದ ಹವಾಮಾನ, ಕಾಸ್ಮೋಪಾಲಿಟಿನ್ ಸಂಸ್ಕೃತಿ, ಅತ್ಯುನ್ನತ ಆಡಳಿತ ಪ್ರಕ್ರಿಯೆ, ಹೂಡಿಕೆಗಿರುವ ವಿಫುಲ ಅವಕಾಶ, ಉದ್ಯೋಗ ಸೃಷ್ಟಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ತಮ್ಮ ಮುಂದಿನ ಯೋಜನೆಗಳನ್ನು ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.