ADVERTISEMENT

ಮತಗಟ್ಟೆ ಸಿಬ್ಬಂದಿಗೂ ಕಾಡಾನೆ ಭಯ

ಕಂಟ್ರೋಲ್‌ ರೂಂ ಸ್ಥಾಪನೆ, ಕಾಡಾನೆ ನಿಯಂತ್ರಣ ಪಹರೆ ತಂಡ ನಿಯೋಜನೆ

ಅದಿತ್ಯ ಕೆ.ಎ.
Published 11 ಏಪ್ರಿಲ್ 2019, 19:45 IST
Last Updated 11 ಏಪ್ರಿಲ್ 2019, 19:45 IST
ಕೊಡಗಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು
ಕೊಡಗಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಚುನಾವಣೆ ಕಾವಿನ ಜೊತೆಗೆ ಬೇಸಿಗೆ ಬಿಸಿಯೂ ಏರಿದ್ದು, ಅರಣ್ಯ ಪ್ರದೇಶದ ಕೆರೆ, ಹೊಂಡಗಳು ಸೇರಿ ಜಲಮೂಲಗಳು ಬತ್ತುತ್ತಿವೆ. ಬಾಯಾರಿದ ವನ್ಯಜೀವಿಗಳು ನಾಡಿಗೆ ಲಗ್ಗೆಯಿಡುತ್ತಿವೆ. ಇದು ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಜತೆಗೆ, ಕಾಡಾನೆ ಭಯವೂ ಕಾಡಲು ಆರಂಭಿಸಿದೆ.

ಏ.18ರಂದು ಕೊಡಗು– ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಕೊಡಗು ಜಿಲ್ಲೆಯಲ್ಲಿ 543 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 61 ಮತಗಟ್ಟೆಗಳಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 482 ಮತಗಟ್ಟೆಗಳಿವೆ. ಗ್ರಾಮೀಣ ಪ್ರದೇಶದ 482 ಮತಗಟ್ಟೆಗಳಲ್ಲಿ 144 ಮತಗಟ್ಟೆಗಳನ್ನು ಕಾಡಾನೆ ಸಂಘರ್ಷವಿರುವ ಮತಗಟ್ಟೆಗಳೆಂದು ಜಿಲ್ಲಾಡಳಿತ ಗುರುತಿಸಿದೆ.

ಬೇರೆ ಜಿಲ್ಲೆಗಳಲ್ಲಿ ಸೂಕ್ಷ್ಮ– ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸುವ ಸ್ಥಿತಿಯಿದ್ದರೆ, ಕೊಡಗಿನಲ್ಲಿ ಮಾತ್ರ ಆನೆ– ಮಾನವ ಸಂಘರ್ಷವಿರುವ ಕೇಂದ್ರಗಳಲ್ಲೂ ತೀವ್ರ ನಿಗಾ ವಹಿಸಬೇಕಾದ ಪರಿಸ್ಥಿತಿಯಿದೆ.

ADVERTISEMENT

ಬೇಸಿಗೆ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಮಾರ್ಚ್ ಕೊನೆಯಲ್ಲಿ ನಾಪೋಕ್ಲು ಸಮೀಪದ ಕಾಫಿ ತೋಟಕ್ಕೆ ಬಂದಿದ್ದ ಕಾಡಾನೆಗಳು ಕೆರೆಯಲ್ಲಿ ಬಿದ್ದಿದ್ದವು. ಅವುಗಳನ್ನು ಮೇಲಕ್ಕೆ ಎತ್ತಲಾಗಿತ್ತು. ಕಳೆದ ವಾರ ಪಾಲಂಗಾಲದಲ್ಲಿ ಮರಿಯಾನೆಯೊಂದು ಹೊಂಡಕ್ಕೆ ಬಿದ್ದಿತ್ತು.

ಮಂಗಳವಾರ ರಾತ್ರಿ ನೀರು ಕುಡಿಯಲು ಬಂದಿದ್ದ ಐದು ಕಾಡಾನೆಗಳು ಪಾಲಂಗಾಲದಲ್ಲೇ ಹೊಂಡಕ್ಕೆ ಬಿದ್ದಿದ್ದವು. ಅಲ್ಲದೆ ಸಿದ್ದಾಪುರ, ನೆಲ್ಯಹುದಿಕೇರಿ, ಮಾದಾಪುರ, ಭೂತನಕಾಡು ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇದೂ ಸಹ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ತಲೆಬಿಸಿ ತಂದಿಟ್ಟಿದೆ.

ಜಿಲ್ಲಾಡಳಿತದ ‘ಪ್ಲಾನ್‌’: ಕಾಡಾನೆ ಸಂಘರ್ಷದ ಮತಗಟ್ಟೆಗಳಲ್ಲಿ ಯಾವುದೇ ತೊಂದರೆಯಾಗದಂತೆ ಮತದಾನ ಪ್ರಕ್ರಿಯೆ ನಡೆಸಲು ಆ ಮತಗಟ್ಟೆಗಳ ಬಳಿ ‘ಕಾಡಾನೆ ನಿಯಂತ್ರಣ ಪಹರೆ ತಂಡ’ ನಿಯೋಜಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಕಾಡಾನೆಗಳು ಅತ್ತ ಸುಳಿಯದಂತೆ ಅವರು ಎಚ್ಚರಿಕೆ ವಹಿಸಿ, ನಿರ್ಭೀತಿಯಿಂದ ಮತದಾನಕ್ಕೆ ಅನುವು ಮಾಡಿಕೊಡಲಿದ್ದಾರೆ. ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು (ಮತ ಖಾತರಿ ಯಂತ್ರ) ಮತಗಟ್ಟೆಗಳಿಗೆ ತಲುಪಿಸಲು ಹಾಗೂ ಅಲ್ಲಿಂದ ಅಂದು ರಾತ್ರಿಯೇ ‘ಸ್ಟ್ರಾಂಗ್‌ ರೂಂ’ಗೆ ತರುವ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಅಲ್ಲದೆ, ಅರಣ್ಯ ಇಲಾಖೆಯಲ್ಲಿ 24X7 ಕಾರ್ಯ ನಿರ್ವಹಿಸುವ ‘ಕಂಟ್ರೋಲ್‌ ರೂಂ’ ತೆರೆಯಲಾಗಿದೆ. ಮತದಾನ ಮುಗಿದ ಬಳಿಕ ರಾತ್ರಿಯೊಳಗೆ ಇವಿಎಂಗಳನ್ನು ಭದ್ರತಾ ಕೊಠಡಿಗೆ ತೊಂದರೆಯಿಲ್ಲದೇ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಚುನಾವಣಾಧಿಕಾರಿಗಳು.

ಜಾಗೃತಿ: ಆನೆ– ಮಾನವ ಸಂಘರ್ಷವಿರುವ ಕಡೆಗಳಲ್ಲಿ ಭಯವಿಲ್ಲದೇ ಕೇಂದ್ರಕ್ಕೆ ಬಂದು ಹಕ್ಕು ಚಲಾವಣೆಗೆ ‘ಸ್ವೀಪ್‌’ ಸಮಿತಿಯಿಂದ ಜಾಗೃತಿ ಮೂಡಿಸಲಾಗಿದೆ. ಒಂದು ವೇಳೆ ಮತಗಟ್ಟೆಗಳಿಗೆ ಬರುವಾಗ ಆನೆಗಳು ಕಾಣಿಸಿಕೊಂಡರೆ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರೆ ಆರ್‌ಆರ್‌ಟಿ (ಕ್ಷಿಪ್ರ ಕಾರ್ಯ ಪಡೆ) ಸಿಬ್ಬಂದಿ ಸ್ಥಳಕ್ಕೆ ಬಂದು ನೆರವಾಗಲಿದ್ದಾರೆ.

ಅಂಗವಿಕಲರಿಗೆ ವಾಹನ ವ್ಯವಸ್ಥೆ
ಕೊಡಗಿನಲ್ಲಿ 3,090 ಅಂಗವಿಕಲ ಮತದಾರರಿದ್ದಾರೆ. ಮತದಾನದಂದು ಅವರ ಮನೆ ಬಾಗಿಲಿಗೆ ಜಿಲ್ಲಾಡಳಿತದ ವಾಹನಗಳು ಬರಲಿವೆ. ಅವರೆಲ್ಲರೂ ಮನೆಯಿಂದಲೇ ನೇರವಾಗಿ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಬಹುದು.

ಅದಕ್ಕಾಗಿಯೇ ಜಿಲ್ಲಾಡಳಿತ 70ಕ್ಕೂ ಹೆಚ್ಚು ಆಟೊ ಹಾಗೂ 76 ಜೀಪುಗಳನ್ನು ಬಾಡಿಗೆಗೆ ಪಡೆದಿದೆ. ಅವುಗಳು ಅಂಗವಿಕಲರನ್ನು ಕರೆದೊಯ್ಯುವ ಹಾಗೂ ಮನೆಗೆ ವಾಪಸ್ ತಂದು ಬಿಡುವ ಕೆಲಸ ಮಾಡಲಿವೆ ಎನ್ನುತ್ತಾರೆ ಅಧಿಕಾರಿಗಳು.

ರಾತ್ರಿ ಕಳೆಯುವ ಭಯ
ಏ. 17ರಂದು ಮಡಿಕೇರಿಯ ಸೇಂಟ್‌ ಜೋಸೆಫ್‌ ಕಾನ್ವೆಂಟ್‌ ಹಾಗೂ ವಿರಾಜಪೇಟೆಯ ಸರ್ಕಾರಿ ಜೂನಿಯರ್‌ ಕಾಲೇಜು ಆವರಣದಲ್ಲಿ ‘ಮಸ್ಟರಿಂಗ್‌’ ಕಾರ್ಯವು ನಡೆಯಲಿದ್ದು, ಅಂದು ಸಂಜೆಯ ಒಳಗೆ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಆನೆ ಸಂಘರ್ಷವಿರುವ ಕೇಂದ್ರಗಳಲ್ಲಿ 24 ತಾಸು ವಿದ್ಯುತ್‌ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಪಹರೆಗೆ ನಿಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.