ADVERTISEMENT

ಮಡಿಕೇರಿಯಲ್ಲಿ ಪ್ರವಾಸಿಗರ ಕಲರವ

ಮೂರು ದಿನಗಳ ‘ಕೊಡಗು ಪ್ರವಾಸಿ ಉತ್ಸವ’ಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 19:45 IST
Last Updated 13 ಜನವರಿ 2019, 19:45 IST
ಮಡಿಕೇರಿಯ ರಾಜಾಸೀಟ್‌ ರಸ್ತೆಯಲ್ಲಿ ಭಾನುವಾರ ನಡೆದ ‘ಓಪನ್‌ ಸ್ಟ್ರೀಟ್‌ ಉತ್ಸವ’ದಲ್ಲಿ ಮರಗಾಲು ಕುಣಿತದ ಕಲಾವಿದರೊಂದಿಗೆ ಪ್ರವಾಸಿಗರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ
ಮಡಿಕೇರಿಯ ರಾಜಾಸೀಟ್‌ ರಸ್ತೆಯಲ್ಲಿ ಭಾನುವಾರ ನಡೆದ ‘ಓಪನ್‌ ಸ್ಟ್ರೀಟ್‌ ಉತ್ಸವ’ದಲ್ಲಿ ಮರಗಾಲು ಕುಣಿತದ ಕಲಾವಿದರೊಂದಿಗೆ ಪ್ರವಾಸಿಗರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ   

ಮಡಿಕೇರಿ: ಪ್ರಾಕೃತಿಕ ವಿಕೋಪದ ಬಳಿಕ ಚೇತರಿಸಿಕೊಳ್ಳುತ್ತಿರುವ ಕೊಡಗು ಜಿಲ್ಲೆಯಲ್ಲಿ ಭಾನುವಾರ ಪ್ರವಾಸಿಗರ ದಂಡು ಕಂಡುಬಂತು. ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕೆ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿದ್ದ ‘ಪ್ರವಾಸಿ ಉತ್ಸವ’ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು.

ಉತ್ಸವಕ್ಕೆ ಬಂದಿದ್ದ ಸಾವಿರಾರು ಮಂದಿ ಪ್ರವಾಸಿಗರು ರಾಜಾಸೀಟ್ ಉದ್ಯಾನ, ಅಬ್ಬಿ–ಮಲ್ಲಳ್ಳಿ–ಇರ್ಪು ಜಲಪಾತ, ಓಂಕಾರೇಶ್ವರ ದೇಗುಲ, ಭಾಗಮಂಡಲ, ತಲಕಾವೇರಿ ಕ್ಷೇತ್ರ ಕಣ್ತುಂಬಿಕೊಂಡರು. 5 ತಿಂಗಳ ಬಳಿಕ ಹೋಂಸ್ಟೇ, ರೆಸಾರ್ಟ್‌ ಹಾಗೂ ವಸತಿಗೃಹಗಳು ಭರ್ತಿ ಆಗಿದ್ದವು.

ಉತ್ಸವದ ಅಂಗವಾಗಿ ಭಾನುವಾರ ಮಡಿಕೇರಿಯಲ್ಲಿ ‘ಓಪನ್‌ ಸ್ಟ್ರೀಟ್‌ ಉತ್ಸವ’ ನಡೆಯಿತು. ಯುವ ಮನಸ್ಸುಗಳು ಸಂಗೀತ, ಡೊಳ್ಳು ಹಾಗೂ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ADVERTISEMENT

ರಾಜಾಸೀಟ್ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನೃತ್ಯ ಹಾಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸುಗ್ಗಿ ಕುಣಿತ, ಚಂಡೆ, ಮರಗಾಲು ಕುಣಿತ, ಜಾದು ಪ್ರದರ್ಶನ ಮತ್ತಷ್ಟು ಮೆರುಗು ತುಂಬಿತು. ಗಾಂಧಿ ಮೈದಾನದ ಭವ್ಯ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳೂ ರಂಜಿಸಿದವು. ಮೂರು ದಿನಗಳ ಉತ್ಸವಕ್ಕೆ ಭಾನುವಾರ ರಾತ್ರಿ ತೆರೆಬಿತ್ತು.

‘ಮಳೆಯಿಂದ ಅನಾಹುತಕ್ಕೆ ಸಿಲುಕಿದ್ದ ಕೊಡಗು ಈಗ ಚೇತರಿಕೊಳ್ಳುತ್ತಿರುವುದು ಸಂತಸವಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಂತೆ ಸಂತ್ರಸ್ತರಿಗೂ ಶೀಘ್ರ ಮನೆ ನಿರ್ಮಿಸಿಕೊಡಲಿ’ ಎಂದು ಪ್ರವಾಸಿಗರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.