ADVERTISEMENT

ರಾತ್ರಿಯಿಡೀ ಕಾಫಿ ತೋಟದಲ್ಲೇ ಇದ್ದ ಕಂದಮ್ಮ ಹೆತ್ತವರ ಮಡಿಲು ಸೇರಿತು

ಒಂದೂವರೆ ವರ್ಷದ ನಿತ್ಯಶ್ರೀ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 17:36 IST
Last Updated 6 ಜನವರಿ 2020, 17:36 IST
ಕೊನೆಗೂ ಹೆತ್ತವರ ಮಡಿಲು ಸೇರಿದ ನಿತ್ಯಶ್ರೀ
ಕೊನೆಗೂ ಹೆತ್ತವರ ಮಡಿಲು ಸೇರಿದ ನಿತ್ಯಶ್ರೀ   

ಮಡಿಕೇರಿ: ಕಗ್ಗತ್ತಲು, ವನ್ಯಜೀವಿಗಳ ಉಪಟಳ, ಗಿಡಮರಗಳ ಸದ್ದು, ಮೈಮರಗಟ್ಟಿಸುವ ಚಳಿ, ಮಂಜಿನ ಹನಿ... ಕಾಫಿ ತೋಟದ ನಡುವೆ ಈ ರೀತಿಯ ವಾತಾವರಣದಲ್ಲಿ ವಯಸ್ಕರೇ ರಾತ್ರಿಯಿಡೀ ಕಾಲ ಕಳೆಯುವುದು ಕಷ್ಟ. ಅದರಲ್ಲೂ ಒಂದೂವರೆ ವರ್ಷದ ಕಂದಮ್ಮ ಕಗ್ಗತ್ತಲಲ್ಲಿ ಕಾಲ ಕಳೆದು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದೆ. ವಿರಾಜಪೇಟೆ ತಾಲ್ಲೂಕಿನ ವೆಸ್ಟ್‌ನಮ್ಮಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತಮಿಳುನಾಡಿನಿಂದ ಕೂಲಿಗಾಗಿ ಕೊಡಗಿಗೆ ಬಂದಿದ್ದ ನಾಗರಾಜ್‌–ಸೀತಾ ದಂಪತಿ ಪುತ್ರಿ ನಿತ್ಯಶ್ರೀ ಬಚಾವ್‌ ಆಗಿ ಬಂದಿದ್ದಾಳೆ.

ವೆಸ್ಟ್‌ನಮ್ಮಲೆಯ ರಾಜಕುಶಾಲಪ್ಪ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ, ಭಾನುವಾರ ಸಂಜೆ ಸೀರೆಯಿಂದ ಜೋಲಿ ಮಾಡಿ ಮಗುವನ್ನು ಮಲಗಿಸಿದ್ದರು. ದಂಪತಿ ಬೇರೆ ಕೆಲಸದಲ್ಲಿ ಮಗ್ನರಾಗಿದ್ದರು. ಬಳಿಕ ಬಂದು ನೋಡುವಷ್ಟರಲ್ಲಿ ಮಗು ನಾಪತ್ತೆ. ಎಲ್ಲಿ ಹುಡುಕಿದರೂ ಮಗು ಕಣ್ಣಿಗೆ ಬೀಳಲಿಲ್ಲ. ಆತಂಕಗೊಂಡಿದ್ದ ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕತ್ತಲು ಆವರಿಸಿತ್ತು. ಆದರೂ, ಟಾರ್ಚ್ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಹುಡುಕಾಟ ನಡೆಸಿದ್ದರು. ಆದರೂ, ಮಗುವಿನ ಸುಳಿವು ಸಿಕ್ಕಿರಲಿಲ್ಲ. ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.

ಸೋಮವಾರ ಬೆಳಿಗ್ಗೆಯೇ ಮತ್ತೆ ಹುಡುಕಾಟ ಆರಂಭಿಸಿದರು. ತೋಟದಲ್ಲಿ ಸಾಗುತ್ತಿರುವಾಗ ಕಾಫಿ ತೋಟದ ಎತ್ತರದ ಪ್ರದೇಶದ ಮರದ ಬುಡದಲ್ಲಿ ನಿತ್ಯಶ್ರೀ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದಳು.

ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಪೋಷಕರಿಗೆ ಒಪ್ಪಿಸಲಾಯಿತು. ಮಗುವನ್ನು ಕಂಡ ಪೋಷಕರು ಮುದ್ದಾಡಿದರು. ಕಾರ್ಯಾಚರಣೆ ತೊಡಗಿದ್ದವರಿಗೂ ದಂಪತಿ ಕೃತಜ್ಞತೆ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.