ADVERTISEMENT

ಯುವಜನರ ದಿಕ್ಕು ತಪ್ಪಿಸುವ ಸರ್ಕಾರಗಳು: ಪ್ರೊ.ಬಾಬು ಮ್ಯಾಥ್ಯು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 21:50 IST
Last Updated 14 ನವೆಂಬರ್ 2021, 21:50 IST
ಕಾರ್ಯಕ್ರಮದಲ್ಲಿ (ಎಡದಿಂದ) ಪ್ರೊ.ಬಾಬು ಮ್ಯಾಥ್ಯು, ಎಐಡಿವೈಒ ಬೆಂಗಳೂರು ಘಟಕದ ಅಧ್ಯಕ್ಷ ಕೃಷ್ಣ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಎಂ.ಎನ್.ಶ್ರೀರಾಮ್ ಮತ್ತು ಎಐಡಿವೈಓನ ಜಿ.ಎಸ್‌.ಕುಮಾರ್ ಇದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಪ್ರೊ.ಬಾಬು ಮ್ಯಾಥ್ಯು, ಎಐಡಿವೈಒ ಬೆಂಗಳೂರು ಘಟಕದ ಅಧ್ಯಕ್ಷ ಕೃಷ್ಣ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಎಂ.ಎನ್.ಶ್ರೀರಾಮ್ ಮತ್ತು ಎಐಡಿವೈಓನ ಜಿ.ಎಸ್‌.ಕುಮಾರ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಮತ್ತು ಅಸಮಾನತೆಗಳು ದೇಶದ ಜನಸಾಮಾನ್ಯರನ್ನು ಉಸಿರುಗಟ್ಟಿಸುವ ಮಟ್ಟಕ್ಕೆ ಬೆಳೆದಿವೆ. ಇವುಗಳನ್ನು ಪರಿಹರಿಸಬೇಕಿದ್ದ ಸರ್ಕಾರಗಳು ಲವ್ ಜಿಹಾದ್, ಅಯೋಧ್ಯೆ ಸೇರಿದಂತೆ ದಿನಕ್ಕೊಂದು ಅನವಶ್ಯಕ ವಿಚಾರಗಳ ಮೂಲಕ ಯುವಜನತೆಯ ದಿಕ್ಕು ತಪ್ಪಿಸುತ್ತಿವೆ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಬಾಬು ಮ್ಯಾಥ್ಯು ಹೇಳಿದರು.

ಆಲ್‌ ಇಂಡಿಯಾ ಡೆಮಾಕ್ರೆಟಿಕ್ ಯೂತ್‌ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಂಗಳೂರು ಜಿಲ್ಲಾ ಯುವಜನ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಬ್ರಿಟೀಷರ ಕಾಲದಿಂದಲೂ ನಾವು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ವಾತಂತ್ರ್ಯದ ನಂತರ ಇವು ಮತ್ತಷ್ಟು ಬಿಗಡಾಯಿಸುತ್ತಲೇ ಇದ್ದು, ಕಡಿಮೆಯಾಗಿಲ್ಲ. ಈ ಸಮಸ್ಯೆಗಳಿಗೆ ಇಂದಿನ ವ್ಯವಸ್ಥೆಯ ಚೌಕಟ್ಟಿನೊಳಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ನಮಗೆ ಹೊಸ ಚಿಂತನೆಯ ಅವಶ್ಯಕತೆ ಇದ್ದು, ಯುವಕರು ಇತಿಹಾಸ ಅರ್ಥಮಾಡಿಕೊಂಡು ದೇಶದ ಬದಲಾವಣೆಗೆ ಶ್ರಮಿಸಬೇಕು. ನಿರುದ್ಯೋಗ ಹಾಗೂ ಅಸಮಾನತೆ ಇರದಂತಹ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು’ ಎಂದು ಹೇಳಿದರು.

ಎಸ್‌ಯುಸಿಐ(ಸಿ) ಪಕ್ಷದ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್, ‘ದೇಶದ ಕೆಲವೇ ಜನ ತಮ್ಮ ಆಸ್ತಿಯನ್ನು ಒಂದೇ ವರ್ಷದಲ್ಲಿ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದ ನೀತಿಗಳೇ ಪ್ರಮುಖ ಕಾರಣ’ ಎಂದು ದೂರಿದರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಜಿ.ಎಸ್.ಕುಮಾರ್, ‘ದೇಶದಲ್ಲಿ ಇಂದು ಅತ್ಯಂತ ನಿಷ್ಕರುಣಿ ಸರ್ಕಾರ ಇದೆ. ಒಂದು ವರ್ಷದಿಂದ ನಡೆಯುತ್ತಿರುವ ಕೃಷಿಕರ ಹೋರಾಟದಲ್ಲಿ ನೂರಾರು ಜನ ಪ್ರಾಣ ತ್ಯಾಗ ಮಾಡಿದ್ದರೂ ಈ ಸರ್ಕಾರ ತನ್ನ ಮೊಂಡುತನ ಬಿಡುತ್ತಿಲ್ಲ. ಸರ್ಕಾರಕ್ಕೆ ತನ್ನ ಘನತೆಗೆ ಧಕ್ಕೆಯಾಗುತ್ತದೆ ಎಂಬ ಚಿಂತೆಯಿತ್ತೇ ಹೊರತು ಜನರ ಪ್ರಾಣದ ಬಗ್ಗೆ ಅಲ್ಲ’ ಎಂದರು.

ಸಮ್ಮೇಳನದಲ್ಲಿ 41 ಜನರ ಹೊಸ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ವಿನಯ್ ಸಾರಥಿ ನೂತನ ಜಿಲ್ಲಾಧ್ಯಕ್ಷರಾಗಿ, ಜಯಣ್ಣ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.