ADVERTISEMENT

ಭಯೋತ್ಪಾದನಾ ಕೃತ್ಯ ಎಸಗಲು‌ ಸಂಚು: ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಸೆರೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 9:28 IST
Last Updated 19 ನವೆಂಬರ್ 2021, 9:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಂಕಿತ ಉಗ್ರ ಜುಹೇಬ್‌ ಹಮೀದ್‌ ಶಕೀಲ್ ಮನ್ನಾ (32) ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ದಕ್ಷಿಣ ಭಾರತದ ಯುವಕರನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಗೆ ಸೇರಿಸಿ ಭಯೋತ್ಪಾದನಾ ಕೃತ್ಯ ಎಸಗಲು‌ ಸಂಚು ರೂಪಿಸಿದ್ದ ಪ್ರಕರಣದಲ್ಲಿ‌ ಈತ ತಲೆಮರೆಸಿಕೊಂಡಿದ್ದ. ಹೋದ ತಿಂಗಳು ಮೊಹಮ್ಮದ್‌ ತೌಕೀರ್‌ (33) ಎಂಬಾತನನ್ನು ಬಂಧಿಸಿದ್ದ ಅಧಿಕಾರಿಗಳು ಇದೀಗ ಜುಹೇಬ್‌ನನ್ನೂ ವಶಕ್ಕೆ ಪಡೆದಿದ್ದಾರೆ.

‘ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಜುಹೇಬ್‌, ನಗರದ ಮುಸ್ಲಿಂ ಯುವಕರನ್ನು ತರಬೇತಿಗಾಗಿ ಸಿರಿಯಾಗೆ ಕಳುಹಿಸಲು ಆರ್ಥಿಕ ನೆರವು ನೀಡುತ್ತಿದ್ದ. ಇದಕ್ಕಾಗಿ ಈಗಾಗಲೇ ಬಂಧಿತರಾಗಿರುವ ನಾಲ್ವರು ಶಂಕಿತ ಉಗ್ರರ ಜೊತೆಗೂಡಿ ‘ಹಿಜ್ಬ್‌ ಉತ್‌ ತಹ್ರೀರ್‌’ ಸಂಘಟನೆ ಕಟ್ಟಿಕೊಂಡಿದ್ದ. ಈ ಗುಂಪಿನವರು ‘ಕುರಾನ್‌ ಸರ್ಕಲ್‌’ ಹೆಸರಿನಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದರು. ಸಿರಿಯಾದ ಐಸಿಸ್‌ ಭಯೋತ್ಪಾದನಾ ಸಂಘಟನೆಯ ನಾಯಕರ ಜೊತೆಗೂ ಸಂಪರ್ಕ ಹೊಂದಿದ್ದರು. ಅವರಿಂದಲೂ ಹಣಕಾಸಿನ ನೆರವು ಪಡೆಯುತ್ತಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ನಗರದ ಮುಸ್ಲಿಂ ಯುವಕರನ್ನು ಸಂಪರ್ಕಿಸುತ್ತಿದ್ದ ಈ ಗುಂಪಿನ ಸದಸ್ಯರು, ಧರ್ಮ ಬೋಧನೆ ನೆಪದಲ್ಲಿ ಅವರಲ್ಲಿ ಐಸಿಸ್‌ ಬಗ್ಗೆ ಒಲವು ಮೂಡಿಸುತ್ತಿದ್ದರು. ಹಣಕಾಸಿನ ನೆರವು ನೀಡಿ ತರಬೇತಿಗಾಗಿ ಸಿರಿಯಾಗೂ ಕಳುಹಿಸುತ್ತಿದ್ದರು. ಸಿರಿಯಾ ಗಡಿ ದಾಟಿಸುವ ಜವಾಬ್ದಾರಿಯನ್ನೂ ಅವರು ವಹಿಸಿಕೊಳ್ಳುತ್ತಿದ್ದರು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.