ADVERTISEMENT

ನೈಸ್‌: ಹೆಚ್ಚುವರಿ ಭೂಮಿ ಹಿಂದಕ್ಕೆ -ಕಂದಾಯ ಸಚಿವ ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 19:31 IST
Last Updated 25 ಏಪ್ರಿಲ್ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನೈಸ್‌ ಕಂಪನಿಗೆ ನೀಡಿರುವ ಹೆಚ್ಚುವರಿ ಭೂಮಿಯನ್ನು ಹಿಂದಕ್ಕೆ ಪಡೆಯಲು ಸಚಿವ ಸಂಪುಟ ಉಪಸಮಿತಿ ಸಭೆ ಒಪ್ಪಿಗೆ ನೀಡಿದ್ದು, ಈ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಸೋಮವಾರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಕ್ಟೋಬರ್‌, ನವೆಂಬರ್‌ ವೇಳೆಗೆ ಹೆಚ್ಚುವರಿ ಭೂಮಿಯನ್ನು ವಾಪಸ್‌ ಪಡೆಯಲಾಗುವುದು ಎಂದರು.

ನೈಸ್‌ ರಸ್ತೆ ದೊಡ್ಡ ಸಮಸ್ಯೆ ಆಗಿದೆ. ಕಾಂಗ್ರೆಸ್ ಮತ್ತು ಜನತಾದಳ ಸರ್ಕಾರದಲ್ಲಿ ನೈಸ್‌ ರಸ್ತೆಗೆ ಬೇಕಾದ ಎಲ್ಲ ರೀತಿಯ ಅನುಮತಿ ನೀಡಲಾಗಿತ್ತು. ಈ ಯೋಜನೆಯಿಂದ ಬೆಂಗಳೂರಿನ ಜನರಿಗೆ ಅನುಕೂಲ ಆಗುವುದಕ್ಕಿಂತ ಹೊರೆಯಾಗಿದೆ. ರಸ್ತೆ ನಿರ್ಮಾಣದಲ್ಲಿ ಸಾಕಷ್ಟು ಉಲ್ಲಂಘನೆಗಳು ನಡೆದಿವೆ ಎಂದು ಅಶೋಕ ಹೇಳಿದರು.

ADVERTISEMENT

ನೈಸ್‌ಗೆ ಹೆಚ್ಚುವರಿಯಾಗಿ 543 ಎಕರೆ ಭೂಮಿ ನೀಡಲಾಗಿದೆ. ಇದನ್ನು ವಾಪಸ್‌ ಪಡೆಯುವ ಸಂಬಂಧ 15 ದಿನಗಳಲ್ಲಿ ಇನ್ನೊಂದು ವರದಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು. ಆ ವರದಿ ಬಂದ ನಂತರ ಹೆಚ್ಚುವರಿ ಭೂಮಿ ಹಿಂದಕ್ಕೆ ಪಡೆಯುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದೂ ಅವರು ತಿಳಿಸಿದರು.

ಟೌನ್‌ಶಿಪ್ ಕಾನೂನು ಬಾಹಿರ: ನೈಸ್‌ ಕಂಪನಿ ಸುಮಾರು 1,600 ಎಕರೆ ಭೂಮಿಯನ್ನು ವಶಪಡಿಸಿಕೊಂಡು ಟೌನ್‌ಶಿಪ್ ಮಾಡುತ್ತಿದೆ. ಇದು ಕಾನೂನು ಬಾಹಿರ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ರೈತರಿಗೆ ಒಂದು ಎಕರೆಗೆ ₹1.60 ಕೋಟಿ ನೀಡುವುದರ ಜೊತೆಗೆ 60x40 ಅಳತೆಯ ನಿವೇಶನವನ್ನೂ ನೀಡಬೇಕು. ಆದರೆ, ಭೂಸ್ವಾದೀನ ಮಾಡಿಕೊಂಡು 20 ವರ್ಷ ಕಳೆದಿದ್ದರೂ ರೈತರಿಗೆ ನ್ಯಾಯ ಸಿಕ್ಕಿಲ್ಲ. ಈ ಹಿಂದೆ ನಿಗದಿಯಾಗಿದ್ದ ₹40 ಲಕ್ಷ ಪರಿಹಾರಕ್ಕೆ ರೈತರು ಒಪ್ಪಿಕೊಂಡಿಲ್ಲ. ನೈಸ್‌ ಒಪ್ಪದಿದ್ದರೆ ರೈತರ ಭೂಮಿಯನ್ನು ರೈತರಿಗೆ ನೀಡಲಾಗುವುದು ಅಥವಾ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದರು.

ಸದನ ಸಮಿತಿ ವರದಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೈಸ್ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿತ್ತು. ಸದಸ್ಯರ ಬೇಡಿಕೆ ಆಧರಿಸಿ ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿಯನ್ನು ರಚಿಸಲಾಗಿತ್ತು. ಹೆಚ್ಚುವರಿಯಾಗಿ ನೀಡಿರುವ ಭೂಮಿಯನ್ನು ಮರುವಶಕ್ಕೆ ಪಡೆದು, ದಂಡವನ್ನೂ ವಸೂಲಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಬಳಿಕ, ಸಮಿತಿ ವರದಿ ನನೆಗುದಿಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.