ADVERTISEMENT

ಕರ್ನಾಟಕದಲ್ಲಿ ಎನ್ಐಪಿಇಆರ್ ಆರಂಭಿಸಿ: ಕೇಂದ್ರಕ್ಕೆ ಪತ್ರ ಬರೆದ ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 14:17 IST
Last Updated 31 ಡಿಸೆಂಬರ್ 2025, 14:17 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು (ಎನ್ಐಪಿಇಆರ್) ಕರ್ನಾಟಕದಲ್ಲಿ ಆರಂಭಿಸಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಸಂಸ್ಥೆಯ ಸ್ಥಾಪನೆಗೆ ಅಗತ್ಯವಿರುವ ಜಮೀನು, ಮೂಲಸೌಕರ್ಯ, ಸಹಭಾಗಿತ್ವ ಸೇರಿ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಈ ಸಂಸ್ಥೆಯನ್ನು ಕರ್ನಾಟಕದಲ್ಲಿ ಆರಂಭಿಸಬೇಕೆಂದು ಕೇಂದ್ರ ಸರ್ಕಾರ ಹಿಂದೊಮ್ಮೆ ಆಲೋಚಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ರಾಜ್ಯದಲ್ಲಿರುವ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು, ಜೈವಿಕ ತಂತ್ರಜ್ಞಾನ ಕಂಪನಿ ಇತ್ಯಾದಿಗಳನ್ನು ಪರಿಗಣಿಸಿ ಈ ಚಿಂತನೆಗೆ ಮರುಜೀವ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ರಾಜ್ಯವು ಔಷಧ ವಿಜ್ಞಾನ, ಬಿ.ಟಿ ಮತ್ತು ಆರೋಗ್ಯ ಸೇವೆಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 400ಕ್ಕೂ ಹೆಚ್ಚು ಬಿ.ಟಿ ಕಂಪನಿಗಳಿವೆ. ಜತೆಗೆ ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ (ಎನ್‌ಸಿಬಿಎಸ್‌), ಬಯೋ ಇನ್‌ಫರ್ಮ್ಯಾಟಿಕ್ಸ್ ಮತ್ತು ಅಪ್ಲೈಡ್ ಬಯೋಟೆಕ್ನಾಲಜಿ (ಐಬಿಎಬಿ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿವೆ. ರಾಜ್ಯ ಸರ್ಕಾರದ ಬಯೋ– ಇನ್ನೊವೇಶನ್ ಸೆಂಟರ್‌ ಮತ್ತು ರಚನಾತ್ಮಕ ಬಿ.ಟಿ ನೀತಿಯ ಮೂಲಕ ಈ ಕ್ಷೇತ್ರದ ನವೋದ್ಯಮಗಳಿಗೆ ಬೆಂಬಲ ಕೊಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

‘ದೇಶದಲ್ಲಿರುವ ಬಿ.ಟಿ.ಕಂಪನಿಗಳ ಪೈಕಿ ಶೇ 60ರಷ್ಟು ರಾಜ್ಯದಲ್ಲೇ ಇವೆ. ಭಾರತವು ಮಾಡುತ್ತಿರುವ ಒಟ್ಟು ಔಷಧ ರಫ್ತಿನಲ್ಲಿ ರಾಜ್ಯದ ಪಾಲು ಶೇ 12 ಇದೆ. ಅಲ್ಲದೆ, ಕ್ಲಿನಿಕಲ್ ಸಂಶೋಧನೆ, ವೈದ್ಯಕೀಯ ಸಾಧನ– ಸಲಕರಣೆಗಳ ತಯಾರಿಕೆ ಮತ್ತು ಎಪಿಐ ಉತ್ಪಾದನೆಯ ಕಾರ್ಯಜಾಲ ನಮ್ಮಲ್ಲಿದೆ. ಇವೆಲ್ಲವುಗಳನ್ನು ಪರಿಗಣಿಸಿ ರಾಜ್ಯಕ್ಕೆ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.