ADVERTISEMENT

ರಾಜಕೀಯಕ್ಕೆ ಸೇನೆ ಹೆಸರು ಬಳಸಲ್ಲ: ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:15 IST
Last Updated 14 ಏಪ್ರಿಲ್ 2019, 20:15 IST
ನಿರ್ಮಲಾ ಸೀತಾರಾಮನ್‌ ಮಾತನಾಡಿದರು– ಪ್ರಜಾವಾಣಿ ಚಿತ್ರ
ನಿರ್ಮಲಾ ಸೀತಾರಾಮನ್‌ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಆಗಲಿ ಅಥವಾ ಎನ್‌ಡಿಎ ನಾಯಕರಾಗಲಿ ಭಾರತೀಯ ಸೇನೆಯನ್ನು ರಾಜಕೀಕರಣ ಮಾಡುತ್ತಿಲ್ಲ. ಆದರೆ, ಸೇನೆಗೆ ಬಲ ತುಂಬುತ್ತೇವೆ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಚಿಂತಕರ ಚಾವಡಿಯ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘2008ರಲ್ಲಿ ಮುಂಬೈ ದಾಳಿ ಘಟಿಸಿತು. ಆಗ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಯಾವ ರೀತಿ ವರ್ತಿಸಿತು ಎಂಬುದು ಇಡೀ ದೇಶಕ್ಕೆ ಗೊತ್ತು. ಆಗಿನದ್ದು ದುರ್ಬಲ ಸರ್ಕಾರ. 2019ರಲ್ಲಿ ಪುಲ್ವಾಮಾ ಘಟನೆಯ ಬಳಿಕ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಿಟ್ಟ ಕ್ರಮ ಕೈಗೊಂಡಿತು. ಪ್ರಬಲ ಸರ್ಕಾರ ಎಂಬುದಕ್ಕೆ ಇದೇ ಸಾಕ್ಷಿ. ಇಂತಹ ಸರ್ಕಾರ ಮತ್ತೆ ಬರಬೇಕಲ್ಲವೇ? ಅಥವಾ ದುರ್ಬಲರಿಗೆ ಮತ ಚಲಾಯಿಸುತ್ತೀರಾ’ ಎಂದು ಪ್ರಶ್ನಿಸಿದರು.

‘ಸೇನೆಯನ್ನು ಬಲಪಡಿಸಬೇಕು ಎಂಬ ರಾಜಕೀಯ ಇಚ್ಛಾಶಕ್ತಿ ನಮ್ಮ ಸರ್ಕಾರಕ್ಕೆ ಇದೆ. ಸೇನೆಗೆ ಬೇಕಾದ ಅಗತ್ಯ ಬೆಂಬಲವನ್ನು ನೀಡಿದ್ದೇವೆ ಹಾಗೂ ಸೌಕರ್ಯಗಳನ್ನು ಒದಗಿಸಿದ್ದೇವೆ. ರಾಜಕೀಯ ಇಚ್ಛಾಶಕ್ತಿ ಬೇರೆ. ರಾಜಕೀಕರಣ ಬೇರೆ. ಇದರ ವ್ಯತ್ಯಾಸ ಗೊತ್ತಿಲ್ಲದ ವಿರೋಧ ಪಕ್ಷಗಳ ನಾಯಕರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ’ ಎಂದರು.

ADVERTISEMENT

ರಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ‘ಮೋದಿ ನೇತೃತ್ವದ ಸರ್ಕಾರ ಐದು ವರ್ಷಗಳಲ್ಲಿ ಯಾವುದೇ ಹಗರಣ ನಡೆಸಿಲ್ಲ. ಆದರೆ, ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ರಾಹುಲ್‌ ಈ ರೀತಿ ಮಾಡುತ್ತಿದ್ದಾರೆ’ ಎಂದರು.

‘ರಕ್ಷಣಾ ಇಲಾಖೆಯಲ್ಲಿ ಈ ಹಿಂದೆ ದಲ್ಲಾಳಿಗಳು ಇದ್ದರು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದಲ್ಲಾಳಿಗಳಿಗೆ ಜಾಗ ಇಲ್ಲದಂತಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.