ADVERTISEMENT

ವಿಶೇಷ ಅನುದಾನಕ್ಕೂ ಸಚಿವೆ ನಿರ್ಮಲಾ ಕೊಕ್ಕೆ

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 19:41 IST
Last Updated 18 ಮಾರ್ಚ್ 2020, 19:41 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘15ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ ಹಂಚಿಕೆಯಾಗಿದ್ದ ₹5,495 ಕೋಟಿ ವಿಶೇಷ ಅನುದಾನಕ್ಕೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೊಕ್ಕೆ ಹಾಕಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕರ್ನಾಟಕ, ಮಿಜೋರಾಂ ಹಾಗೂ ತೆಲಂಗಾಣಕ್ಕೆ ಈ ಅನುದಾನ ಹಂಚಿಕೆ ಮಾಡಲಾಗಿತ್ತು. ರಾಜ್ಯಕ್ಕೆ ಹಂಚಿಕೆಯಾದ ಅನುದಾನವನ್ನು ಮರುಪರಿಶೀಲಿಸಿ ಎಂದು ನಿರ್ಮಲಾ ಸೂಚಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ’ ಎಂದು ದೂರಿದರು.

‘ಈ ಅನ್ಯಾಯದ ವಿರುದ್ಧ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ 25 ಸಂಸದರು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಧ್ವನಿ ಎತ್ತಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸರ್ವಪಕ್ಷದ ನಿಯೋಗ ಹೋಗೋಣ. ನಿಮಗೆ ಪ್ರಶ್ನಿಸಲು
ಧೈರ್ಯ ಇಲ್ಲದಿದ್ದರೆ ನಾನೇ ಮಾತನಾಡು
ತ್ತೇನೆ. ಇದನ್ನು ನಾವು ಪ್ರತಿಭಟಿಸಲೇಬೇಕು’ ಎಂದು ಅವರು ಹೇಳಿದರು.

ADVERTISEMENT

‘15ನೇ ಹಣಕಾಸು ಆಯೋಗವು ರಾಜ್ಯದ ಪಾಲನ್ನು ₹8,887 ಕೋಟಿಯಷ್ಟು ಕಡಿಮೆ ಮಾಡಿದೆ. ಜಿಎಸ್‌ಟಿ ‍ಪರಿಹಾರ ಮೊತ್ತವೂ ಈ ವರ್ಷ ₹3 ಸಾವಿರ ಕೋಟಿ ಕಡಿಮೆಯಾಗಿದೆ. ಈ ವರ್ಷ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣವೂ ₹5 ಸಾವಿರ ಕೋಟಿಯಷ್ಟು ಕಡಿಮೆಯಾಗಲಿದೆ. ₹16 ಸಾವಿರ ಕೋಟಿಯಷ್ಟು ಆದಾಯ ಕಡಿಮೆಯಾದರೆ ಅಭಿವೃದ್ಧಿ ಹೇಗೆ ನಡೆಸುವುದು. ಅದಕ್ಕೆ ನಾನು ದರಿದ್ರ ಸರ್ಕಾರ ಎಂದಿರುವುದು’ ಎಂದು ಟೀಕಿಸಿದರು.

‘ಕಳೆದ ಸಾಲಿನ ಬಜೆಟ್‌ ಗಾತ್ರ ₹2.34 ಲಕ್ಷ ಕೋಟಿ ಆಗಿತ್ತು. ಪರಿಷ್ಕೃತ ಬಜೆಟ್‌ ಗಾತ್ರ 2.26 ಲಕ್ಷ ಕೋಟಿಗೆ ಇಳಿದಿತ್ತು. ಈ ಸಲ ಬಜೆಟ್‌ ಗಾತ್ರ ₹2.37 ಲಕ್ಷ ಕೋಟಿಗೆ ಏರಿದೆ. ಬಜೆಟ್‌ನ ಶೇ 90ರಷ್ಟನ್ನು ಬದ್ಧ ವೆಚ್ಚಕ್ಕೆ (ಸರ್ಕಾರಿ ನೌಕರರ ವೇತನ, ಪಿಂಚಣಿ, ಸಾಲ ಮರುಪಾವತಿ ಮತ್ತಿತರ) ಮೀಸಲಿಡಬೇಕಿದೆ. 2022ರ ಬಳಿಕ ಜಿಎಸ್‌ಟಿ ಪರಿಹಾರವೂ ಸಿಗುವುದಿಲ್ಲ. ಆಗೇನು ಮಾಡುತ್ತೀರಿ’ ಎಂದು ಅವರು ಪ್ರಶ್ನಿಸಿದರು.

‘ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಎಲ್ಲಿದೆ ಆ ಸ್ವರ್ಗ’ ಎಂದು ಅವರು ವ್ಯಂಗ್ಯವಾಗಿ ಕೇಳಿದರು.

‘14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಶೇ 4.7 ಪಾಲು ನೀಡಲಾಗಿತ್ತು. 15ನೇ ಹಣಕಾಸು ಆಯೋಗದಲ್ಲಿ ಅದನ್ನು ಶೇ 3.64ಕ್ಕೆ ಇಳಿಸಲಾಗಿದೆ. ಬಿಹಾರಕ್ಕೆ ಶೇ 10 ಹಾಗೂ ಉತ್ತರ ಪ್ರದೇಶಕ್ಕೆ ಶೇ 17 ಹಂಚಿಕೆ ಮಾಡಲಾಗಿದೆ. ಅತೀ ಹೆಚ್ಚು ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಕೆಟ್ಟದಾಗಿ ಆರ್ಥಿಕ ನಿರ್ವಹಣೆ ಮಾಡಿದ ರಾಜ್ಯಗಳಿಗೆ ಹೆಚ್ಚು ಅನುದಾನ ಕೊಡಲಾಗಿದೆ. ಉತ್ತಮ ನಿರ್ವಹಣೆ ಮಾಡಿದ ಕರ್ನಾಟಕಕ್ಕೆ ಬರೆ ಹಾಕಲಾಗಿದೆ. ಇದು ಕೇಂದ್ರ ಸರ್ಕಾರದ ತಾರತಮ್ಯಕ್ಕೆ ಸಾಕ್ಷಿ’ ಎಂದು ಬೊಟ್ಟು ಮಾಡಿ ಹೇಳಿದರು.

‘ಅರ್ಥವ್ಯವಸ್ಥೆ ಗಾತ್ರವನ್ನು 5 ಟ್ರಿಲಿಯನ್‌ ಡಾಲರ್‌ಗೆ (₹370 ಲಕ್ಷ ಕೋಟಿ) ಹಿಗ್ಗಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ನೋಟು ರದ್ದತಿ ಹಾಗೂ ಜಿಎಸ್‌ಟಿಯಿಂದ ಬೆಳವಣಿಗೆ ದರ 5ಕ್ಕಿಂತ ಕೆಳಗೆ ಇಳಿದಿದೆ. ಉದ್ಯೋಗ ಸೃಷ್ಟಿಯೇ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.