ADVERTISEMENT

ದೇಶದ ಅಭಿವೃದ್ಧಿಗೆ ಖಾಸಗೀಕರಣ ಅನಿವಾರ್ಯ: ನಿರ್ಮಲಾ ಸೀತಾರಾಮನ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 20:57 IST
Last Updated 21 ಫೆಬ್ರುವರಿ 2021, 20:57 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ಬೆಂಗಳೂರು: ‘ಉತ್ತಮವಾಗಿ ಕಾರ್ಯ ನಿರ್ವಹಿಸದೇ ಇರುವ ಸಾರ್ವಜನಿಕ ಸಂಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಮಾಡಲು ಮತ್ತು ದೇಶದ ಅಭಿವೃದ್ಧಿ ಸಾಧಿಸಲು ಖಾಸಗೀಕರಣ ಅನಿವಾರ್ಯ’ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಬಿಜೆಪಿ ಆರ್ಥಿಕ ಪ್ರಕೋಷ್ಠವು ಕೇಂದ್ರ ಬಜೆಟ್‌ ಕುರಿತು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಭಾರತವೆಂದರೆ ಮೂಲಸೌಕರ್ಯಗಳ ಕೊರತೆ ಇರುವ ದೇಶ ಎಂಬ ಮಾತಿತ್ತು. ದೀನದಯಾಳ್‌ ಉಪಾಧ್ಯಾಯರ ‘ಅಂತ್ಯೋದಯ’ ಚಿಂತನೆಗಳೊಂದಿಗೆ ಇಂತಹ ಮಾತುಗಳನ್ನು ತೊಡೆದು ಹಾಕಲು ಕೇಂದ್ರ ಸರ್ಕಾರವು ಶ್ರಮಿಸುತ್ತಿದೆ’ ಎಂದರು.

‘ಉಜ್ವಲ, ಉಜಾಲಾ, ಸ್ವನಿಧಿ, ಮುದ್ರಾ, ಜನೌಷಧಿ, ಕಿಸಾನ್ ಸಮ್ಮಾನ್‍ನಂಥ ಯೋಜನೆಗಳ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಬಡವರ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ನೀಡಿದೆ’ ಎಂದು ಹೇಳಿದರು.

ADVERTISEMENT

‘ಉಜ್ವಲ ಯೋಜನೆಯಡಿ ಈಗಾಗಲೇ 8 ಕೋಟಿ ಬಡವರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ನೀಡಿದ್ದು, ಈ ಬಜೆಟ್‍ನಡಿ ಮತ್ತೆ 1 ಕೋಟಿಗಳಷ್ಟು ಅರ್ಹ ಬಡವರಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು’ ಎಂದರು.

‘1969ರಲ್ಲಿ ಬ್ಯಾಂಕ್‍ಗಳ ರಾಷ್ಟ್ರೀಕರಣ ನಡೆದರೂ ಬಡವರಿಗೆ ಅದರಿಂದ ವಿಶೇಷ ಪ್ರಯೋಜನ ಲಭಿಸಿರಲಿಲ್ಲ. ಆಧಾರ್ ಸಂಖ್ಯೆಯನ್ನು ಮೊಬೈಲ್‍ ಸಂಖ್ಯೆಗೆ ಜೋಡಿಸಿ ಜನಧನ್ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದರಿಂದ ನಿಜವಾದ ಬಡವರಿಗೆ ಈ ಯೋಜನೆಯ ಪ್ರಯೋಜನ ಲಭಿಸುತ್ತಿದೆ’ ಎಂದು ತಿಳಿಸಿದರು.

ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಮೀರ್ ಕಾಗಲ್ಕರ್, ಪ್ರಕೋಷ್ಠದ ಸಲಹೆಗಾರರಾದ ವಿಶ್ವನಾಥ ಭಟ್, ಸಹ ಸಂಚಾಲಕ ಕರಣ್ ಜವಾಜೆ, ಆಹ್ವಾನಿತ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.