ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಬೆಂಗಳೂರು: ‘ಭಾರತ @2047’ ಎಂಬುದು ಕೇವಲ ಘೋಷಣೆ ಆಗಬಾರದು. ಬದಲಿಗೆ ಅಸಮಾನತೆಯ ಅಂತರಗಳನ್ನು ತೊಡೆದುಹಾಕುವ ಸಾಧನವಾಗಬೇಕು. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮಾದರಿಯಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 2047ಕ್ಕೆ ನೂರು ವರ್ಷಗಳಾಗಲಿದೆ. ಇದಕ್ಕಾಗಿ ಭಾರತ ಸರ್ಕಾರವು ‘ಭಾರತ @2047’ ಕಾರ್ಯಕ್ರಮವನ್ನು ರೂಪಿಸಿದೆ. ಈ ಸಂಬಂಧ ನೀತಿ ಆಯೋಗವು ಶನಿವಾರ ಆಯೋಜಿಸಿದ್ದ ಸಭೆಗೆ ಸಿದ್ದರಾಮಯ್ಯ ಅವರು ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣಕ್ಕೆ ಗೈರಾಗಿದ್ದರು.
‘ಭಾರತ @2047’ಗೆಂದು ಸಿದ್ಧಪಡಿಸಿ ಸಲ್ಲಿಸಿರುವ ಸಲಹೆ ಮತ್ತು ಧ್ಯೇಯಗಳನ್ನು ಒಳಗೊಂಡ ಈ ವರದಿಯನ್ನು ಸಿದ್ದರಾಮಯ್ಯ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ಹಿಮಾಲಯದ ಅಂಚಿನ ರಾಜ್ಯಗಳು, ಗಂಗಾ ಬಯಲಿನ ಪ್ರದೇಶಗಳು ಮತ್ತು ಕಾವೇರಿ ಕಣಿವೆಯ ರಾಜ್ಯಗಳನ್ನು ಏಕರೂಪದಲ್ಲಿ ಅಭಿವೃದ್ಧಿಪಡಿಸುವ ಹಾಗೂ ಅಭಿವೃದ್ಧಿಯ ಪಥದಲ್ಲಿ ಒಟ್ಟಿಗೇ ಕರೆದೊಯ್ಯುವ ಧ್ಯೇಯವನ್ನು ‘ಭಾರತ @2047’ ಒಳಗೊಳ್ಳಬೇಕು’ ಎಂದು ಸಿದ್ದರಾಮಯ್ಯ ಅವರು ಪ್ರತಿಪಾದಿಸಿದ್ದಾರೆ.
‘ಭಾರತ @2047 ಸಾಧಿಸುವಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದದ ಹಾದಿಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ನಮ್ಮ ಗಣತಂತ್ರ ವ್ಯವಸ್ಥೆಯ ಜೀವಾಳವಾದ ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆ, ಅಧಿಕಾರ ವಿಕೇಂದ್ರೀಕರಣ, ಲಭ್ಯ ಸಂಪನ್ಮೂಲಗಳನ್ನು ರಾಜ್ಯಗಳ ಮಧ್ಯೆ ಸಮನಾಗಿ ಹಂಚಿಕೆ ಮಾಡುವುದು ಈ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಲಿದೆ. ಹೀಗಾಗಿ ಈ ಎಲ್ಲವನ್ನೂ ಗಮನದಲ್ಲಿ ಇರಿಸಿಕೊಂಡೇ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಅವರು ವಿವರಿಸಿದ್ದಾರೆ.
‘ಎಂತಹ ಒಳ್ಳೆಯ ನೀತಿ ಮತ್ತು ಕಾರ್ಯಕ್ರಮ ರೂಪಿಸಿದರೂ ಅದರ ಅನುಷ್ಠಾನ ಸರಿಯಾಗಿ ಆಗದೇ ಇದ್ದರೆ, ಅದು ವ್ಯರ್ಥವಾಗುತ್ತದೆ. ಹೀಗಾಗಿ ಅಧಿಕಾರ ವಿಕೇಂದ್ರೀಕರಣ, ಫಲಿತಾಂಶ ಆಧಾರಿತ ಹೊಣೆಗಾರಿಕೆ ನಿಗದಿ ಮಾಡುವುದರಿಂದ ಇದನ್ನು ಸಾಧಿಸಬಹುದಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮಾದರಿಯನ್ನು ಕರ್ನಾಟಕ ಸರ್ಕಾರವು ಈಗಾಗಲೇ ರೂಪಿಸಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ.– ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಬೆಂಗಳೂರಿನಲ್ಲಿ ಕುಳಿತು ನಿಂದಿಸಿದರೆ ಸಾಕೇ’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರವನ್ನು ನಿಂದಿಸುತ್ತಾ ಕೂತರೆ ಪ್ರಯೋಜನವಿಲ್ಲ. ಹದಿನಾಲ್ಕು ಬಜೆಟ್ ಮಂಡಿಸಿದ ಅವರು ನೀತಿ ಆಯೋಗದ ಸಭೆಗೆ ಗೈರು ಆಗುವುದು ಎಷ್ಟು ಸರಿ? ರಾಜಕೀಯ ಪ್ರತಿಷ್ಠೆಗೆ ರಾಜ್ಯದ ಹಿತವನ್ನು ಬಲಿಕೊಡುವುದು ತಪ್ಪು. ಸಂವಾದವೇ ಇಲ್ಲದಿದ್ದರೆ ಸಮಸ್ಯೆ ಹೇಗೆ ಬಗೆಹರಿಯುತ್ತದೆ. ರಾಷ್ಟ್ರದ ನೀತಿ ನಿರೂಪಣೆ, ಅಭಿವೃದ್ಧಿಗೆ ಸಂಬಂಧಿಸಿ ಪ್ರಧಾನಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅವರು ತಪ್ಪದೇ ಭಾಗವಹಿಸಬೇಕಿತ್ತು. ಮುಂದಾದರೂ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿಯವರು ಇಂತಹ ಸಭೆಯಲ್ಲಿ ತಪ್ಪದೇ ಭಾಗವಹಿಸಬೇಕು ಎಂಬುದು ನನ್ನ ಸಲಹೆ. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ.– ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.