ADVERTISEMENT

ಶರಾವತಿ ಯೋಜನೆಯಿಂದ ಪ್ರತಿಕೂಲ ಪರಿಣಾಮ ಇಲ್ಲ: ಕೆಪಿಸಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 22:30 IST
Last Updated 22 ಜನವರಿ 2025, 22:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ನವದೆಹಲಿ: ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಹೇಳಿದೆ. 

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ‘ಶರಾವತಿ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಆಪತ್ತು’ ವರದಿಗೆ ‍ಸ್ಪಷ್ಟನೆ ನೀಡಿರುವ ನಿಗಮವು, ‘ಡಿಸಿಎಫ್‌ಗಳು ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳ ನಿಯಮಗಳ ಅನ್ವಯ ಕಾರ್ಯಾಚರಣೆ ಮಾಡಬೇಕು ಎಂದು ಹೇಳಿದ್ದಾರೆ. ನಿಯಮಗಳನ್ನು ಅನುಸರಿಸಿದರೆ ಮಾತ್ರ ಯೋಜನೆಗೆ ಇಲಾಖೆಗಳು ಅನುಮತಿ ನೀಡುತ್ತವೆ’ ಎಂದು ತಿಳಿಸಿದೆ. 

ADVERTISEMENT

‘ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಲವಿದ್ಯುತ್‌ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯ 2011ರಲ್ಲಿ ಸುತ್ತೋಲೆ ಹೊರಡಿಸಿರುವುದು ಮತ್ತು ಈ ಯೋಜನೆಯು ಶರಾವತಿ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲೇ ಕಾರ್ಯಗತಗೊಳ್ಳುತ್ತಿದೆ ಎಂಬುದು ಹೌದಾದರೂ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಲ ವಿದ್ಯುತ್ ಯೋಜನೆಯೊಂದಿಗೆ ಸಮೀಕರಿಸುವುದು ಸರಿಯಲ್ಲ. ಏಕೆಂದರೆ, ಜಲ ವಿದ್ಯುತ್ ಯೋಜನೆ ಎಂಬುದು ಪಂಪ್ಡ್ ಸ್ಟೋರೇಜ್ ಯೋಜನೆಗಿಂತ ವಿಭಿನ್ನವಾಗಿದ್ದು, ಈ ಯೋಜನೆಯಡಿ ಜಲಾಶಯಗಳನ್ನು ನಿರ್ಮಿಸುವ ಅಗತ್ಯ ಇರುವುದಿಲ್ಲ. ಈಗಿರುವ ಜಲಾಶಯಗಳನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮತ್ತು ಶೇಖರಣೆ ಮಾಡುವುದರಿಂದ ಈ ಸ್ಥಳ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಸೂಕ್ತವಾದ ಪ್ರದೇಶ. ಇಲ್ಲಿ ಯಾವುದೇ ಹೊಸ ಜಲಾಶಯಗಳ ನಿರ್ಮಾಣ ಮಾಡದೇ ಇರುವುದರಿಂದ ಪ್ರಸ್ತುತ ಇರುವ ನದಿಯ ಹರಿವಿನಲ್ಲಿ ಯಾವುದೇ ಮಾರ್ಪಾಡು ಆಗುವುದಿಲ್ಲ’ ಎಂದು ನಿಗಮ ಸ್ಪಷ್ಟಪಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.