ADVERTISEMENT

ಪ್ರಧಾನಿ ಮೋದಿಗೆ ಬೈದಿಲ್ಲ: ಸಚಿವ ಸಂತೋಷ ಲಾಡ್‌

​ಪ್ರಜಾವಾಣಿ ವಾರ್ತೆ
Published 28 ಮೇ 2025, 12:34 IST
Last Updated 28 ಮೇ 2025, 12:34 IST
ಸಂತೋಷ ಲಾಡ್‌
ಸಂತೋಷ ಲಾಡ್‌   

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದಲ್ಲಿ ದೇವಮಾನವನನ್ನಾಗಿ ಮಾಡಿದ್ದಾರೆ. ಅವರನ್ನು ಪ್ರಶ್ನಿಸಿದರೆ ಬಿಜೆಪಿ ನಾಯಕರು ನನ್ನ ವಿರುದ್ಧ ಹರಿಹಾಯುತ್ತಾರೆ’ ಎಂದು ಸಚಿವ ಸಂತೋಷ ಲಾಡ್‌ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನಾನು ಯಾವತ್ತೂ ಬೈದಿಲ್ಲ. ಅವರನ್ನು ಪ್ರಶ್ನಿಸಿರುವುದನ್ನೇ ಬೈದಿದ್ದೇನೆ ಎಂದು ಭಾವಿಸಿ, ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೆಲ ಬಿಜೆಪಿ ನಾಯಕರು ನನ್ನ ಮೇಲೆ ಹರಿಹಾಯುತ್ತಾರೆ. ಮೋದಿ ಅವರಿಗೆ ಪ್ರಶ್ನೆ ಮಾಡಿದರೆ, ನಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೇನೆ ಎನ್ನುತ್ತಾರೆ. ಅವರ ಬುದ್ದಿಯೇ ಅಷ್ಟು’ ಎಂದು ಕಿಡಿಕಾರಿದರು.

‘ಬಿಜೆಪಿ ನಾಯಕರು ಬೇರೆ ಪಕ್ಷದ ನಾಯಕರಿಗೆ ಏಕವಚನದಲ್ಲಿ ಸಂಬೋಧಿಸಬಹುದು, ಬೈಯ್ಯಬಹುದು. ದೇಶದ ಅಭಿವೃದ್ಧಿ ಕುರಿತು ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ಪ್ರಶ್ನಿಸಬಾರದು ಎಂದರೆ ಏನರ್ಥ’ ಎಂದು ಪ್ರಶ್ನಿಸಿದರು.

ADVERTISEMENT

‘ಮಧ್ಯಪ್ರದೇಶದಲ್ಲಿ ನಡೆದ ಬಹುಕೋಟಿ ವ್ಯಾಪಂ(ವ್ಯಾವಸಾಯಿಕ ಪರೀಕ್ಷಾ ಮಂಡಳಿ) ಪ್ರಕರಣದಲ್ಲಿ 44 ಮಂದಿ ಕೊಲೆಯಾಗಿರುವ ಹಾಗೂ ಬಿಎಸ್‌ಎನ್‌ಎಲ್‌ ನಷ್ಟದ ವಿಚಾರದ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಎನ್ನುವ ಬಿಜೆಪಿ ನಾಯಕರು, ಒಂದೇ ಒಂದು ಹೇರ್‌ಪಿನ್‌, ಬಾಚಣಿಕೆ ತಯಾರಿಸಿಲ್ಲ’ ಎಂದು ದೂರಿದರು.

‘ಬಿಜೆಪಿ ಉಚ್ಚಾಟಿತ ಶಾಸಕರಾದ ಶಿವರಾಮ ಹೆಬ್ಬಾರ ಮತ್ತು ಎಸ್‌.ಟಿ. ಸೋಮಶೇಖರ ಅವರು ಕಾಂಗ್ರೆಸ್‌ ಸೇರ್ಪಡೆಯಾಗುವ ಕುರಿತು ಹೈಕಮಾಂಡ್‌ ನಿರ್ಧರಿಸುತ್ತದೆ. ಕಾಂಗ್ರೆಸ್‌ ಯಾವಾಗಲೂ ಡಬಲ್‌ ಡೆಕ್ಕರ್‌ ಬಸ್‌ ಇದ್ದಂತೆ. ಎಲ್ಲರನ್ನೂ ಸ್ವಾಗತಿಸುತ್ತದೆ’ ಎಂದರು.

ನಟ ಕಮಲ್‌ ಹಾಸನ್‌ ಕನ್ನಡದ ಬಗ್ಗೆ ಏನು ಹೇಳಿದ್ದಾರೆ ಎಂದು ಸರಿಯಾಗಿ ತಿಳಿದಿಲ್ಲ. ನಮ್ಮ ಭಾಷೆಯನ್ನು ಅಪಮಾನ ಮಾಡಿದ್ದರೆ, ಅದು ಖಂಡನೀಯ
ಸಂತೋಷ ಲಾಡ್‌, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.