ADVERTISEMENT

ರಾಜ್ಯಪಾಲರ ಭಾಷಣ ಮುಗಿಯುವರೆಗೂ ಬಜೆಟ್‌ ಪ್ರತಿ ಇಲ್ಲ!: ಕುಮಾರಸ್ವಾಮಿ ನಿರ್ಧಾರ

ಮುಖ್ಯಮಂತ್ರಿ ನಡೆಗೆ ಬಿಜೆಪಿ ನಾಯಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:27 IST
Last Updated 7 ಫೆಬ್ರುವರಿ 2019, 19:27 IST

ಬೆಂಗಳೂರು: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಭಾಷಣ ಓದಲು ಬಿಡದ ಬಿಜೆಪಿ ಸದಸ್ಯರು ಶುಕ್ರವಾರ ಬಜೆಟ್ ಮಂಡನೆಗೂ ರಾದ್ಧಾಂತ ಮಾಡಬಹುದೆಂದು ಅಂದಾಜಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಜೆಟ್‌ ಭಾಷಣ ಮುಗಿಯುವರೆಗೂ ಪ್ರತಿ ನೀಡದಿರಲು ನಿರ್ಧರಿಸಿದ್ದಾರೆ.

ಲೋಕಸಭೆಯಲ್ಲಿ ಬಜೆಟ್‌ ಮಂಡಿಸುವ ಮಾದರಿಯನ್ನೇ ರಾಜ್ಯದಲ್ಲೂ ಅನುಸರಿಸಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ.‌

ಮಂಡನೆಯಾಗುತ್ತಿದ್ದಂತೆ ಬಜೆಟ್‌ ಪ್ರತಿ ಹಂಚಿದರೆ ಬಿಜೆಪಿ ಸದಸ್ಯರು ಅದನ್ನು ಸದನದಲ್ಲಿ ಹರಿದುಹಾಕಿ ಗದ್ದಲ ಎಬ್ಬಿಸುವ ಸಾಧ್ಯತೆ ಇದೆ. ಮಾಧ್ಯಮಗಳಲ್ಲಿ ಅದೇ ದೊಡ್ಡ ಸದ್ದು ಮಾಡಲಿದೆ. ಅದಕ್ಕೆ ಅವಕಾಶ ನೀಡಬಾರದು ಎಂಬ ಮುಂದಾಲೋಚನೆಯಿಂದ ಕುಮಾರಸ್ವಾಮಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ADVERTISEMENT

ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಈ ಬಗ್ಗೆ ಸಭಾಧ್ಯಕ್ಷರಿಗೆ ದೂರು ನೀಡಿದೆ. ‘ಸದಸ್ಯರಿಗೆ ಬಜೆಟ್ ಪ್ರತಿ ನೀಡದೆ ಮಂಡಿಸುವುದು ಸರಿಯಲ್ಲ. ಮುಖ್ಯಮಂತ್ರಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ಧಾರೆ.

ಬಜೆಟ್ ಮಂಡಿಸುತ್ತಿದ್ದಂತೆ ಎಲ್ಲ ಸದಸ್ಯರಿಗೆ ಅದರ ಪ್ರತಿ ನೀಡುವುದು ರೂಢಿ. ಅದನ್ನು ಕುಮಾರಸ್ವಾಮಿ ಮೊದಲ ಬಾರಿಗೆ ಮುರಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.