ADVERTISEMENT

‘ಬಸ್ ಪ್ರಯಾಣ ದರ ಏರಿಕೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 3:35 IST
Last Updated 13 ಅಕ್ಟೋಬರ್ 2018, 3:35 IST
   

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸೇರಿರುವ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟ ಸೂಚನೆ ನೀಡಿದ್ದಾರೆ.

ಶುಕ್ರವಾರ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಬಸ್‌ ಪ್ರಯಾಣ ದರ ಏರಿಸುವ ವಿವಿಧ ನಿಗಮ
ಗಳ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

‘ಸಾರಿಗೆ ಸಂಸ್ಥೆಗಳು ಅನುಭವಿಸುತ್ತಿರುವ ನಷ್ಟವನ್ನು ಭರಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕೇ ಹೊರತು ಬಸ್‌ ದರ ಏರಿಸುವ ಮೂಲಕ ನಷ್ಟ ತುಂಬಿಕೊಳ್ಳುವುದು ಬೇಡ. ದರ ಏರಿಕೆ ಮಾಡಲೇಬೇಕಾದ ಸಂದರ್ಭ ಬಂದರೆ ಅದಕ್ಕೆ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು’ ಎಂದು ಅವರು ನಿರ್ದೇಶನ ನೀಡಿದರು.

ADVERTISEMENT

ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ಶೇ 20 ರಷ್ಟು ಹೆಚ್ಚಿಸಬೇಕು ಎಂದು ನಿಗಮಗಳು ಪ್ರಸ್ತಾವ ಸಲ್ಲಿಸಿ
ದ್ದವು. ದರ ಏರಿಕೆ ಪ್ರಸ್ತಾವಕ್ಕೆ ಮುಖ್ಯಮಂತ್ರಿ ತಡೆಯೊಡ್ಡುತ್ತಲೇ ಬಂದಿದ್ದರು. ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾ
ಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ದರ ಏರಿಕೆ ಪ್ರಸ್ತಾವ ಮಂಡಿಸಿದರು.

ಡೀಸೆಲ್‌ ಮತ್ತು ಪೆಟ್ರೋಲ್‌ ದರ ಏರಿಕೆಯಾಗಿರುವುದರಿಂದ ಇಂಧನದ ಮೇಲಿನ ಖರ್ಚು ವಿಪರೀತ ಏರಿಕೆಯಾಗಿದೆ. ಆದ್ದರಿಂದ ಶೇ 20ರಷ್ಟು ದರ ಏರಿಕೆ ಅನಿವಾರ್ಯ.ನಾಲ್ಕೂ ಸಾರಿಗೆ ಸಂಸ್ಥೆಗಳು (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆ) ನಷ್ಟದಲ್ಲಿಯೇ ನಡೆಯುತ್ತಿವೆ. ಕಾರ್ಯಾಚರಣೆಯ ಒಟ್ಟು ವೆಚ್ಚದಲ್ಲಿ ಶೇ 40ರಷ್ಟು ಇಂಧನಕ್ಕೆ ವ್ಯಯವಾದರೆ, ಸಿಬ್ಬಂದಿ ವೇತನ ಹೆಚ್ಚಳದಿಂದಲೂ ಸಂಸ್ಥೆಗಳಿಗೆ ಹೊರೆಯಾಗಿದೆ. ದರ ಏರಿಕೆ ಮಾಡಿದರೆ, ಈ ಹೊರೆಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಪ್ರತಿಪಾದಿಸುತ್ತಲೇ ಬಂದಿದ್ದಾರೆ.

ರಾಜಸ್ವ ಏರಿಕೆ:ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ₹131 ಕೋಟಿ ಅಧಿಕವಾಗಿದೆ. ಹೀಗಿರುವಾಗ ದರ ಏರಿಸುವ ಚಿಂತನೆ ಕೈಬಿಡಿ ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.