ADVERTISEMENT

ಕಾನೂನುಬಾಹಿರ ಗಣಿಗಾರಿಕೆಗೆ ಅವಕಾಶ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 16:05 IST
Last Updated 5 ಅಕ್ಟೋಬರ್ 2023, 16:05 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಕೆಂಪುಕಲ್ಲು ಮತ್ತು ಮಣ್ಣಿನ ವಿಚಾರದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು, ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳ ಜೊತೆ ಗುರುವಾರ ಅವರು ಸಭೆ ನಡೆಸಿದರು.

ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕ‌ ಮರಳು ಬ್ಲಾಕ್‌ಗಳಿಗೆ ಅನುಮತಿ ನೀಡಲಾಗುತ್ತಿದೆ. ಪ್ರಾಧಿಕಾರದ ಸಭೆ ತಿಂಗಳಿಗೊಮ್ಮೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಪ್ರಾಧಿಕಾರದ ಆಯುಕ್ತರಿಗೆ ಮುಖ್ಯಮಂತ್ರಿ ಸೂಚಿಸಿದರು.

ADVERTISEMENT

ಮಾಜಿ ಸಚಿವ ವಿನಯ್‌ಕುಮಾರ್‌ ಸೊರಕೆ, ‘2021ರ ಡಿ. 1ರಿಂದ ಹೊಸ ಮರಳು ನೀತಿ ಜಾರಿಗೆ ಬಂದಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕರ ಹಿತಾಸಕ್ತಿ ಕಾಪಾಡುವ ಜೊತೆಗೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರ ಹಿತಾಸಕ್ತಿಯನ್ನು ಕಾಪಾಡಬೇಕಿದೆ. ಕಾರ್ಮಿಕರಿಗೆ ಸಮಸ್ಯೆ ಆಗದಂತೆ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅಲ್ಲದ ಪ್ರದೇಶದಲ್ಲಿ ಟೆಂಡರ್ ಕಂ ಹರಾಜು ಮೂಲಕ ಮಂಜೂರು ಮಾಡಲು 39 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ, 9 ಬ್ಲಾಕ್‌ಗಳ ಟೆಂಡರ್ ಪ್ರಕ್ರಿಯೆ ನಡೆದಿದೆ. ಉಳಿದ 30 ಬ್ಲಾಕ್‌ಗಳಿಗೆ ಮರು ಹರಾಜು ಪ್ರಕ್ರಿಯೆ ಶೀಘ್ರ ಕೈಗೊಳ್ಳಲಾಗುವುದು’ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದರು.

‘ಮರಳು ಗಣಿಗಾರಿಕೆಗೆ ಜಿಲ್ಲಾಧಿಕಾರಿಗಳ ಮೂಲಕ ಪರವಾನಗಿ ನೀಡಬೇಕು. ಮನೆ ಕಟ್ಟಲು ಅಗತ್ಯವಿರುವ ಸೈಜು ಕಲ್ಲುಗಳಿಗೆ ಗಣಿಗಾರಿಕೆ ಮಾಡಲು ಕಾಯ್ದೆಯ ಸರಳೀಕರಣ ಮಾಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಬೇಕು’ ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.

ಕೆಂಪುಕಲ್ಲಿನ ಗಣಿಗಾರಿಕೆ ಒಂದು ವರ್ಷದ ಅವಧಿಗೆ 71 ಕಾರ್ಯಾದೇಶಗಳನ್ನು ನೀಡಲಾಗಿದೆ.  ಈಗ ಕೆಂಪುಕಲ್ಲಿನ ಖನಿಜಕ್ಕೆ ಕಾರ್ಯಾದೇಶ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ವೇತನ ಪಾವತಿಸಲು ಸೂಚನೆ: ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಂಬತ್ತು ಡಯಾಲಿಸಿಸ್ ಯಂತ್ರಗಳ ಪೈಕಿ ಒಂದು ಯಂತ್ರ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಸಿಬ್ಬಂದಿಗೆ ಆರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಸಭೆಯಲ್ಲಿ ಗಮನಕ್ಕೆ ತಂದಾಗ, ತಕ್ಷಣ ವೇತನ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.