ADVERTISEMENT

‘ನಿಫಾಕ್ಕೂ ಮಾವಿಗೂ ಸಂಬಂಧವಿಲ್ಲ’

ಕಾನೂನು ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:28 IST
Last Updated 6 ಜುಲೈ 2018, 19:28 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ‘ಮಾವಿಗೂ ನಿಫಾ ವೈರಾಣುವಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಸಂಬಂಧ ಅಪಪ್ರಚಾರ ನಡೆದಿದ್ದರಿಂದ ಮಾವು ಬೆಳೆಗಾರರು ನಷ್ಟ ಅನುಭವಿಸಬೇಕಾಯಿತು’ ಎಂದು ಕಾನೂನು ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಶುಕ್ರವಾರ ಸ್ಪಷ್ಟಪಡಿಸಿದರು.

ಸಭಾಧ್ಯಕ್ಷ ರಮೇಶಕುಮಾರ್‌, ‘ಈ ಸಲ ಮಾವಿಗೆ ಹಿಡಿದ ಯಾವುದೋ ರೋಗದ ಕಾರಣದಿಂದ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ತೋಟಗಾರಿಕೆ ಸಚಿವರು ಇತ್ತ ಗಮನಹರಿಸಬೇಕು’ ಎಂದು ಸೂಚಿಸಿದರು. ಮಧ್ಯ ಪ್ರವೇಶಿಸಿದ ಕಾನೂನು ಸಚಿವರು ಮೇಲಿನಂತೆ ಸ್ಪಷ್ಟನೆ ನೀಡಿದರು.

‘ಮಾಧ್ಯಮಗಳು ಬೇಜವಾಬ್ದಾರಿಯಿಂದ ಸುಳ್ಳು ಮಾಹಿತಿ ಪ್ರಸಾರ ಮಾಡಿದಷ್ಟು ಆ ವೈರಾಣುವಿನ ಕುರಿತು ಸರಿಯಾದ ವಿವರಣೆ ಕೊಟ್ಟಾಗ ಪ್ರಚಾರ ಕೊಡಲಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ‘ಅಯ್ಯಯ್ಯೋ ಅವರಿಗೆ ಹೇಳಲು ಆಗುತ್ತದೆಯೇ? ಯಾವುದೇ ವ್ಯಕ್ತಿಯ ಕುರಿತು ಆರೋಪ ಬಂದರೆ ದೊಡ್ಡದಾಗಿ ಬಿಂಬಿಸುತ್ತಾರೆ. ಆ ವ್ಯಕ್ತಿ ಸ್ಪಷ್ಟನೆ ನೀಡಿದರೆ ಅದರತ್ತ ತಿರುಗಿಯೂ ನೋಡುವುದಿಲ್ಲ. ಗಲಾಟೆ ಮಾಡಿದರೆ ಇನ್ನೂ ಜಾಸ್ತಿ ಬೆಳೆಸುತ್ತಾರೆ. ಸುಮ್ಮನಿರುವುದೇ ವಾಸಿ’ ಎಂದು ಹೇಳಿದರು.

‘ಮನುಷ್ಯನಿಗೆ ನಾಯಿ ಕಚ್ಚಿದರೆ ಸುದ್ದಿಯಲ್ಲ; ನಾಯಿಗೆ ಮನುಷ್ಯ ಕಚ್ಚಿದರೆ ಅವರಿಗೆ ಸುದ್ದಿ’ ಎಂದೂ ತಿವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.