ADVERTISEMENT

ರೇಣುಕಸ್ವಾಮಿ ಕೊಲೆಗೆ ಪಿತೂರಿ ನಡೆದಿಲ್ಲ: ಪವಿತ್ರಾಗೌಡ ಪರ ಹಿರಿಯ ವಕೀಲರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 16:31 IST
Last Updated 3 ಡಿಸೆಂಬರ್ 2024, 16:31 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರೇಣುಕಸ್ವಾಮಿ ಕೊಲೆಗೆ ಯಾವುದೇ ಪಿತೂರಿ ನಡೆದಿಲ್ಲ. ರೇಣುಕಸ್ವಾಮಿಯನ್ನು ಪಟ್ಟಣಗೆರೆಯ ಜಯಣ್ಣ ಶೆಡ್‌ಗೆ ಕರೆತಂದಾಗ ಪವಿತ್ರಾಗೌಡ ಅವರು ದರ್ಶನ್‌ ಜೊತೆ ತೆರಳಿ ರೇಣುಕಸ್ವಾಮಿಗೆ ಒಮ್ಮೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಅಷ್ಟೇ. ಆನಂತರ ಅಲ್ಲಿಂದ ತೆರಳಿದ್ದಾರೆ. ಆಮೇಲೆ ಏನಾಯಿತು ಎಂಬುದು ಅವರಿಗೆ ಗೊತ್ತಿಲ್ಲ’ ಎಂದು ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿಯಾಗಿರುವ ನಟಿ ಹಾಗೂ ಮಾಡೆಲ್ ಪವಿತ್ರಾಗೌಡ ಪರ ಹಿರಿಯ ವಕೀಲರು ಹೈಕೋರ್ಟ್‌ಗೆ ಅರುಹಿದರು.

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌, ಪವಿತ್ರಾ ಗೌಡ, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನುಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

ವಿಚಾರಣೆ ವೇಳೆ ಪವಿತ್ರಾ ಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌, ‘ಪ್ರಕರಣದ ಮತ್ತೊಬ್ಬ ಆರೋಪಿಯಾದ ಶಿವಕುಮಾರ್‌ ಹೇಳಿಕೆಯನ್ನು ಗಮನಿಸಿದರೆ, ರೇಣುಕಸ್ವಾಮಿಯ ಅಪಹರಣವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಂತೆಯೇ, ನಟ ಚಿಕ್ಕಣ್ಣ, ನವೀನ್‌ ಕುಮಾರ್‌, ಯಶಸ್‌ ಸೂರ್ಯ ಅವರ ಹೇಳಿಕೆಗಳನ್ನೂ ಪರಿಶೀಲಿಸಿದರೆ ರೇಣುಕಸ್ವಾಮಿ ಕೊಲೆ ಮಾಡುವ ಸಂಬಂಧ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂಬುದು ವೇದ್ಯವಾಗುತ್ತದೆ. ಯಾವ ಪ್ರತ್ಯಕ್ಷ ಸಾಕ್ಷಿಯೂ ಪವಿತ್ರಾಗೌಡ ಅವರತ್ತ ಬೆರಳು ಮಾಡಿಲ್ಲ ಎಂಬುದು ಗಮನಾರ್ಹ. ರೇಣುಕಸ್ವಾಮಿ ಅಪಹರಣ ಮತ್ತು ಕೊಲೆಯಲ್ಲಿ ಪವಿತ್ರಾ ಗೌಡ ಅವರ ಯಾವುದೇ ಪಾತ್ರವಿಲ್ಲ. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ದರ್ಶನ್‌ ಕಾರು ಚಾಲಕ ಎಂ.ಲಕ್ಷ್ಮಣ್‌ ಪರ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ‘ಗೋಲ್ಡನ್‌ ಅವರ್‌ನಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ವಿಳಂಬವಾಗಿರುವ ಕಾರಣ ತನಿಖೆಯ ಸಾಚಾತನವನ್ನು ನಂಬಲಾಗುತ್ತಿಲ್ಲ. ಅನಾಮಧೇಯರು ಎಂದು ಎಫ್‌ಐಆರ್‌ ಮಾಡಲಾಗಿದೆ. ಆರೋಪಿಗಳು ಗೊತ್ತು ಎಂದು ಯಾವ ಸಾಕ್ಷಿಯೂ ಹೇಳಿಲ್ಲ. ಹೇಳಿಕೆ ದಾಖಲೆಯಲ್ಲಿನ ವಿಳಂಬಕ್ಕೆ ಯಾವುದೇ ವಿವರಣೆ ನೀಡಲಾಗಿಲ್ಲ. ಗುರುತು ಪತ್ತೆ ಪರೇಡ್‌ ಕೂಡಾ ನಡೆದಿಲ್ಲ. ಸಿ.ಸಿ.ಟಿ.ವಿ ವಿಡಿಯೊ ತುಣುಕುಗಳಿಗೆ ಸಂಬಂಧಿಸಿದಂತೆ ಸೈಬರ್‌ ಕಾನೂನಿನ ವರದಿಯನ್ನೂ ಪಡೆದಿಲ್ಲ’ ಎಂದು ಆಕ್ಷೇಪಿಸಿದರು.

‘ಫೋನ್‌ ಕರೆಗಳ ದಾಖಲೆಗೆ ಸಂಬಂಧಿಸಿದ ರೇಖಾಚಿತ್ರವು ಸೆನ್‌ ಠಾಣೆಯ ಕಾನ್‌ಸ್ಟೆಬಲ್‌ ಅವರ ಕಲ್ಪನೆಯ ಕಲಾ ಕೌಶಲದ ಕಸುಬು ಎಂಬುದಕ್ಕೆ ಸಾಕ್ಷಿಯಾಗಿದೆ. ಜಪ್ತಿ ಮಾಡಿರುವ ಪ್ಯಾಂಟ್‌, ಶರ್ಟ್‌ ಮತ್ತು ಚಪ್ಪಲಿಯಲ್ಲಿ ರಕ್ತದ ಕಲೆ ಇತ್ತು ಎಂಬ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯೇ ಅಂತಿಮವಲ್ಲ. ಇಂತಹ ವರದಿಗಳನ್ನೂ ತಿರುಚಬಹುದಾದ ಸಾಧ್ಯತೆಗಳಿರುತ್ತವೆ ಎಂಬುದಕ್ಕೆ ಹೈಕೋರ್ಟ್‌ನ ಸಮನ್ವಯ ಪೀಠದ ಆದೇಶವಿದೆ ಎಂಬುದನ್ನು ನಾವು ಕಡೆಗಣಿಸಬಾರದು’ ಎಂದರು.

‘ಲಕ್ಷ್ಮಣ್‌ ಅವರು ದರ್ಶನ್‌ ಕಾರು ಚಾಲಕನಾಗಿರುವುದರಿಂದ ಪದೇಪದೇ ಅವರಿಗೆ ಮೊದಲಿನಿಂದಲೂ ಕರೆ ಮಾಡುತ್ತಿದ್ದರು. ಇಲ್ಲಿ ಕೊಲೆ ಮಾಡುವ ಸಮಾನ ಉದ್ದೇಶ ಕಾಣುತ್ತಿಲ್ಲ. ಆದ್ದರಿಂದ, ಆರೋಪಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.

ಅನುಕುಮಾರ್‌ ಅಲಿಯಾಸ್‌ ಅನು ಮತ್ತು ಜಗದೀಶ್‌ ಅಲಿಯಾಸ್‌ ಜಗ್ಗ ಪರ ಹೈಕೋರ್ಟ್‌ ವಕೀಲ ರಂಗನಾಥ್‌ ರೆಡ್ಡಿ, ‘ಫೋನ್‌ ಕರೆ ದಾಖಲೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ರೇಖಾಚಿತ್ರದಲ್ಲಿ ಅನುಕುಮಾರ್‌ ಮತ್ತು ಜಗದೀಶ್‌ ಇಲ್ಲ. ಪ್ರತ್ಯಕ್ಷ ಸಾಕ್ಷಿಗಳೂ ಸಹ ಅರ್ಜಿದಾರರ ವಿರುದ್ಧ ಪ್ರತಿಕೂಲ ಹೇಳಿಕೆ ನೀಡಿಲ್ಲ. ಹೀಗಾಗಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು. ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿದೆ. 

ಪ್ರಕರಣದ ಪ್ರತಿವಾದಿಯೂ ಆದ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್ ಶುಕ್ರವಾರ (ಡಿ.6) ತಮ್ಮ ವಾದ ಮಂಡಿಸಬೇಕಿದೆ. ದರ್ಶನ್‌ ಪರ ವಕಾಲತ್ತು ವಹಿಸಿರುವ ಹೈಕೋರ್ಟ್‌ ವಕೀಲ ಎಸ್‌.ಸುನಿಲ್‌ ಕುಮಾರ್ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.