ADVERTISEMENT

ರಾಜ್ಯದಲ್ಲಿ ಸದ್ಯಕ್ಕಿಲ್ಲ ಮಕ್ಕಳಿಗೆ ಶಾಲೆ

ಪುನರಾರಂಭದ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ: ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 15:57 IST
Last Updated 4 ನವೆಂಬರ್ 2020, 15:57 IST
ಸುರೇಶ್‌ಕುಮಾರ್
ಸುರೇಶ್‌ಕುಮಾರ್   

ಬೆಂಗಳೂರು: ‘ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,‘ಈ ಕುರಿತು ಶಿಕ್ಷಣ ಇಲಾಖೆ ವಿವಿಧ ಸ್ತರಗಳಲ್ಲಿ ಸಮಾಲೋಚನೆ-ಸಂವಾದಗಳನ್ನು ಕೈಗೊಂಡಿದ್ದು, ಮುಖ್ಯಮಂತ್ರಿಗಳಿಗೆ ರಾಜ್ಯದ ಸ್ಥಿತಿಗತಿಗಳನ್ನು ಮನದಟ್ಟು ಮಾಡಿದ ನಂತರವೇ ಆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ರಾಜ್ಯಗಳ ಪರಿಸ್ಥಿತಿ ಅವಲೋಕನ:

ADVERTISEMENT

ಆಂಧ್ರ ಪ್ರದೇಶ, ಅಸ್ಸಾಂ ಮತ್ತು ಉತ್ತರಾಖಂಡ್‌ನಲ್ಲಿ ಶಾಲೆಗಳು ಪುನರಾರಂಭವಾಗಿವೆ. ತಮಿಳುನಾಡು, ಒಡಿಶಾ ಮತ್ತು ಹರಿಯಾಣ ರಾಜ್ಯ ನ.16ರಿಂದ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿವೆ. ಅಲ್ಲಿನ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಲಾಗುವುದು’ ಎಂದೂ ಅವರು ತಿಳಿಸಿದರು.

ಎಲ್ಲರೊಂದಿಗೆ ಚರ್ಚೆ:

‘ರಾಜ್ಯದಲ್ಲಿರುವ ವಸತಿ ಶಾಲೆಯವರ ಜತೆ ಇಲಾಖೆಯ ಆಯುಕ್ತರು ಚರ್ಚೆ ನಡೆಸಲಿದ್ದಾರೆ. ಶಿಕ್ಷಕರ ಸಂಘಗಳ ಪದಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗಿದೆ. ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಮತ್ತು ಮೈಸೂರಿನ ಖಾಸಗಿ ಶಾಲೆಗಳ ಪ್ರತಿನಿಧಿಗಳು ಸಭೆ ನಡೆಸುತ್ತಿದ್ದಾರೆ. ನಂತರ,ಆರೋಗ್ಯ ಇಲಾಖೆ ಸೇರಿದಂತೆ ಸಮಾಜ ಕಲ್ಯಾಣ, ಸಾರಿಗೆ ಇಲಾಖೆಯ ಜೊತೆಗೂ ಮಾತುಕತೆ ನಡೆಸಲಾಗುತ್ತದೆ’ ಎಂದರು.

‘ಶಾಲಾ ಅಭಿವೃದ್ಧಿ ಸಮಿತಿಗಳ ಜೊತೆಗೂ ಈ ಬಗ್ಗೆ ಚರ್ಚೆ ಮಾಡುತ್ತವೆ. ಪ್ರತಿ ತಾಲ್ಲೂಕುಗಳಿಂದ ಎರಡು ಎಸ್‌ಡಿಎಂಸಿಗಳ ಪ್ರತಿನಿಧಿಗಳ ಜೊತೆ ಆಯುಕ್ತರು ಮಾತುಕತೆ ನಡೆಸಲಿದ್ದಾರೆ’ ಎಂದರು.

‘ಮಕ್ಕಳ ಹಿತ ಹಾಗೂ ಮಕ್ಕಳ ಆರೋಗ್ಯವೇ ಪ್ರಧಾನವಾಗಿರುವುದರಿಂದ ಶಾಲೆಗಳನ್ನು ತಕ್ಷಣದಲ್ಲೇ ಆರಂಭಿಸುವ ಉದ್ದೇಶವಿಲ್ಲವಾದರೂ, ಮಕ್ಕಳು ಶಾಲೆಯಿಂದ ಬಹುಕಾಲ ಹೊರಗುಳಿಯುವುದರಿಂದಾಗುವ ಸಮಸ್ಯೆಗಳ ಕುರಿತೂ ಚಿಂತಿಸಬೇಕಾದ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.