ADVERTISEMENT

ಸಂಪುಟ ವಿಸ್ತರಣೆಗೆ ಅನುಮತಿ ಸಿಕ್ಕಿಲ್ಲ: ಸಚಿವ ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 8:23 IST
Last Updated 6 ಡಿಸೆಂಬರ್ 2020, 8:23 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಇನ್ನೂ ಅನುಮತಿ ನೀಡಿಲ್ಲ. ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಬಿಜೆಪಿ ರಾಜ್ಯ ಉಸ್ತವಾರಿಯಾಗಿರುವ ಅರುಣ್‌ ಸಿಂಗ್‌ ಅವರು ಪಕ್ಷದ ರಾಜ್ಯ ಘಟಕದ ಕಚೇರಿಯಲ್ಲಿ ಸಚಿವರು, ಶಾಸಕರು ಮತ್ತು ಪ್ರಮುಖ ಪದಾಧಿಕಾರಿಗಳ ಅಭಿಪ‍್ರಾಯ ಸಂಗ್ರಹಿಸುತ್ತಿದ್ದಾರೆ. ಉಸ್ತುವಾರಿ ಭೇಟಿಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಶೋಕ, ಸಂಪುಟ ವಿಸ್ತರಣೆ ವಿಳಂಬವಾಗಲಿದೆ ಎಂದರು.

‘ಸಂಪುಟ ವಿಸ್ತರಣೆ, ನಿಗಮ– ಮಂಡಳಿಗಳ ನೇಮಕಾತಿ ಕುರಿತು ಸಚಿವರು, ಶಾಸಕರು, ಪಕ್ಷದ ಪ್ರಮುಖರ ಅಭಿಪ್ರಾಯ ಆಲಿಸಲು ವರಿಷ್ಠರು ನಿರ್ಧರಿಸಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಎಲ್ಲರಿಗೂ ಸಮಯ ನಿಗದಿ ಮಾಡಿದ್ದಾರೆ. ಅಭಿಪ್ರಾಯ ಆಲಿಸಿದ ಬಳಿಕ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಿದ್ದಾರೆ. ನಂತರ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸುವರು. ಆ ಬಳಿಕವೇ ಸಂಪುಟ ವಿಸ್ತರಣೆ ಕುರಿತು ತೀರ್ಮಾನ ಹೊರಬೀಳಲಿದೆ’ ಎಂದು ಹೇಳಿದರು.

ADVERTISEMENT

ಕುಮಾರಸ್ವಾಮಿ ಸಹಾಯ ಅಗತ್ಯವಿಲ್ಲ: ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶೋಕ, ‘ಸದ್ಯಕ್ಕೆ ನಮಗೆ ಕುಮಾರಸ್ವಾಮಿ ಅವರ ಸಹಾಯದ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರೇ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಬಿಜೆಪಿಗೆ ಈಗ ಯಾರ ಜತೆಗೂ ಒಳ ಒಪ್ಪಂದವೂ ಬೇಡ, ಹೊರ ಒಪ್ಪಂದವೂ ಬೇಡ‘ ಎಂದರು.

‘ಬಿಜೆಪಿ ಕೊಟ್ಟ ಮಾತಿಗೆ ತಪ್ಪದ ಪಕ್ಷ. ಆಡಿದ ಮಾತಿನಂತೆ ಕುಮಾರಸ್ವಾಮಿ ಅವರನ್ನು 20 ತಿಂಗಳ ಕಾಲ ಮುಖ್ಯಮಂತ್ರಿ ಮಾಡಿದ್ದೆವು. ಐದು ವರ್ಷ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಪಕ್ಷ ಒಂದೇ ವರ್ಷದಲ್ಲಿ ಸರ್ಕಾರ ಉರುಳಿಸಿತು. ಕಾಂಗ್ರೆಸ್‌ ವಿಷ ಕಕ್ಕುವ ಪಕ್ಷ. ಅದನ್ನು ನಂಬಿದರೆ ಗೋವಿಂದ‘ ಎಂದು ಹೇಳಿದರು.

ಬಿಬಿಎಂಪಿ ವಾರ್ಡ್‌ ಹೆಚ್ಚಳಕ್ಕೆ ಮಸೂದೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಮಸೂದೆ ರೂಪಿಸಲಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ಅದಕ್ಕೆ ಒಪ್ಪಿಗೆ ದೊರೆಯಲಿದೆ. ಆಗ ಹೊಸ ಕಾಯ್ದೆ ಪ್ರಕಾರವೇ ಚುನಾವಣೆ ನಡೆಸಲು ಅವಕಾಶ ದೊರೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.