ADVERTISEMENT

ಅಂತರ್ ರಾಜ್ಯ ಬಸ್‌ ಸಂಚಾರಕ್ಕಿಲ್ಲ ಅವಕಾಶ: ಗಡಿಭಾಗದ ಜನರ ಪರದಾಟ!

ಶ್ರೀಕಾಂತ ಕಲ್ಲಮ್ಮನವರ
Published 20 ಜೂನ್ 2020, 19:30 IST
Last Updated 20 ಜೂನ್ 2020, 19:30 IST
ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು. – ಸಂಗ್ರಹ ಚಿತ್ರ
ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು. – ಸಂಗ್ರಹ ಚಿತ್ರ   

ಬೆಳಗಾವಿ: ಕೋವಿಡ್‌–19 ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ನೆರೆಯ ಮಹಾರಾಷ್ಟ್ರದ ನಗರಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಪರ್ಕ ಕಡಿತಗೊಂಡಿದ್ದರಿಂದ ಗಡಿಭಾಗದ ಬಡ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ, ಕಾಗವಾಡ, ಹುಕ್ಕೇರಿ ಹಾಗೂ ಖಾನಾಪುರದ ಜನರು ಪಕ್ಕದ ಕೊಲ್ಹಾಪುರ, ಸಾಂಗಲಿ, ಜತ್ತ, ಮಿರಜ್‌ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ವ್ಯಾಪಾರ– ವಹಿವಾಟು, ಉದ್ಯೋಗದ ಜೊತೆ ರಕ್ತ ಸಂಬಂಧ, ಮದುವೆಯ ಬಾಂಧವ್ಯಗಳೂ ಇವೆ. ಪ್ರತಿದಿನ ಸಾವಿರಾರು ಜನರು ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಜನರು ಸಂಚರಿಸುತ್ತಿದ್ದರು. ಆದರೆ, ಈಗ ಅಂತರ್‌ರಾಜ್ಯ ಸಾರಿಗೆ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಅವರೆಲ್ಲರೂ ಕಷ್ಟ ಅನುಭವಿಸುತ್ತಿದ್ದಾರೆ.

ಕಳೆದ ವಾರದಿಂದ ಲಾಕ್‌ಡೌನ್‌ ನಿಯಮಗಳಲ್ಲಿ ಕೆಲವುಗಳನ್ನು ಸಡಿಲಿಕೆ ಮಾಡಿ, ಅಂತರ್‌ರಾಜ್ಯ ಸಂಚರಿಸಲು ಜನರಿಗೆ ಅನುವು ಮಾಡಿಕೊಡಲಾಗಿದೆ. ಸೇವಾ ಸಿಂಧು ಆ್ಯಪ್‌ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಗಡಿ ಪ್ರದೇಶದಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎನ್ನುವ ಷರತ್ತಿನೊಂದಿಗೆ ಸರ್ಕಾರವು ಅನುಮತಿ ನೀಡಿದೆ. ಆದರೆ, ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರಕ್ಕೆ ಇನ್ನೂ ಅನುಮತಿ ನೀಡಿಲ್ಲ. ಖಾಸಗಿ ವಾಹನಗಳು ಹಾಗೂ ಬಾಡಿಗೆ ಟ್ಯಾಕ್ಸಿಗಳಿಗೆ ಅನುಮತಿ ನೀಡಿದೆ.

ADVERTISEMENT

ಬಾಡಿಗೆ ನಾಲ್ಕು ಪಟ್ಟು:

ಅಂತರ್‌ರಾಜ್ಯ ಗಡಿದಾಟಿ ಸಂಚರಿಸಿದರೆ ಕ್ವಾರಂಟೈನ್‌ ಆಗಬೇಕಾಗುತ್ತದೆ ಎನ್ನುವ ಭಯದಿಂದ ಕೆಲವು ಬಾಡಿಗೆ ಟ್ಯಾಕ್ಸಿ ಚಾಲಕರು ಬರುತ್ತಿಲ್ಲ. ಇನ್ನು ಕೆಲವರು ಯದ್ವಾತದ್ವಾ ಬಾಡಿಗೆ ಕೇಳುತ್ತಿದ್ದಾರೆ. ಅಂತರ್‌ರಾಜ್ಯ ಸಂಚರಿಸಲು ಸಾರಿಗೆ ಬಸ್‌ಗಳಿಗೆ ಅವಕಾಶ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಬಾಡಿಗೆ ಟ್ಯಾಕ್ಸಿಗಳ ಚಾಲಕರು ಸಾಮಾನ್ಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬಾಡಿಗೆ ಕೇಳುತ್ತಿರುವುದು ಕಂಡುಬಂದಿದೆ.

ಬೆಳಗಾವಿಯಿಂದ ಸುಮಾರು 120 ಕಿ.ಮೀ ದೂರವಿರುವ ಕೊಲ್ಹಾಪುರಕ್ಕೆ ಹೋಗಲು ₹ 5 ಸಾವಿರ ಕೇಳುತ್ತಿದ್ದಾರೆ. ಮಿರಜ್‌ ಹಾಗೂ ಸಾಂಗ್ಲಿಗಾದರೆ ₹ 10 ಸಾವಿರವರೆಗೂ ಕೇಳುತ್ತಿದ್ದಾರೆ. ಬಡ ಜನರು ಹಾಗೂ ಮಧ್ಯಮ ವರ್ಗದ ಜನರು ಇಷ್ಟೊಂದು ಹಣ ನೀಡಿ ಪ್ರಯಾಣಿಸಲಾಗದೇ ಪರಿತಪಿಸುತ್ತಿದ್ದಾರೆ.

ಆದಾಯಕ್ಕೆ ಹೊಡೆತ:

ಗಡಿಭಾಗದ ಜನರು ವಿವಿಧ ಕೆಲಸಗಳಿಗಾಗಿ ಮಹಾರಾಷ್ಟ್ರದ ನಗರಗಳಿಗೆ ತೆರಳುತ್ತಿದ್ದರು. ಕಟ್ಟಡ ಕಾರ್ಮಿಕರು, ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ದಿನಗೂಲಿ ಮಾಡುವವರು, ಆಸ್ಪತ್ರೆಗಳ ಕೆಲಸಗಾರರು, ವಕೀಲರು, ವೈದ್ಯರು ಸೇರಿದಂತೆ ಹಲವು ವೃತ್ತಿಪರರು ಆ ಭಾಗವನ್ನೇ ಹೆಚ್ಚು ನೆಚ್ಚಿಕೊಂಡಿದ್ದರು. ಅವರೆಲ್ಲ ಈಗ ಆ ಕಡೆ ಹೋಗಲಾಗದೇ ದುಡಿಮೆ, ಆದಾಯ ಕಳೆದುಕೊಂಡಿದ್ದಾರೆ. ಎಷ್ಟೋ ಜನರಿಗೆ ತಮ್ಮ ನೆಂಟರಿಷ್ಟರನ್ನು ಕಾಣಲು ಸಹ ಆಗಿಲ್ಲ. ಅಂತ್ಯಕ್ರಿಯೆ, ಮದುವೆಯಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲೂ ಸಾಧ್ಯವಾಗಿಲ್ಲ.

‘ಮಾಸ್ಕ್‌, ಸ್ಯಾನಿಟೈಸರ್‌ ಬಳಸುವುದು ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ಮುಂಜಾಗ್ರತೆಗಳನ್ನು ಕೈಗೊಂಡ ಬೇಗನೇ ಅಂತರ್‌ರಾಜ್ಯ ಬಸ್‌ ಸಂಚಾರ ಆರಂಭಿಸಬೇಕು’ ಎಂದು ಗಡಿಭಾಗದ ಜನರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.