ADVERTISEMENT

15 ವರ್ಷಗಳ ಬಳಿಕ ‘ಜಾರಕಿಹೊಳಿ’ ಇಲ್ಲದ ಸಚಿವ ಸಂಪುಟ!

ಶ್ರೀಕಾಂತ ಕಲ್ಲಮ್ಮನವರ
Published 20 ಆಗಸ್ಟ್ 2019, 19:30 IST
Last Updated 20 ಆಗಸ್ಟ್ 2019, 19:30 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ಜಾರಕಿಹೊಳಿ ಕುಟುಂಬದ ಸದಸ್ಯರನ್ನು ಸಚಿವ ಸಂಪುಟದಿಂದ ಹೊರಗಿಡುವ ಮೂಲಕ ಬಿಜೆಪಿ ಶಾಕ್‌ ನೀಡಿದೆ. ಕಳೆದ ಒಂದೂವರೆ ದಶಕದಿಂದ, ಯಾವುದೇ ಪಕ್ಷದ ಅಧಿಕಾರವಿದ್ದರೂ ಈ ಕುಟುಂಬದ ಸಹೋದರರಲ್ಲೊಬ್ಬರು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದರು. ಅಂತಹ ಅವಕಾಶ ಈ ಸಲ ತಪ್ಪಿಹೋಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಅರಭಾವಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸ್ಥಾನ ದೊರೆತಿಲ್ಲ. ಇತರ, ಇಬ್ಬರಿಗೆ ಅವಕಾಶ ಸಿಕ್ಕಿದೆ.ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಅಥಣಿಯ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆತಿದೆ. ಪಕ್ಷ ನಿಷ್ಠೆ ಹಾಗೂ ಪಕ್ಷ ಕಟ್ಟಲು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಇವರಿಗೆ ಸ್ಥಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

2004ರಿಂದಲೂ ಸಚಿವ ಸ್ಥಾನ:ಕಳೆದ 15 ವರ್ಷಗಳಿಂದಲೂ ಪ್ರತಿ ಸರ್ಕಾರದಲ್ಲಿ ಜಾರಕಿಹೊಳಿ ಸಹೋದರರ ಪೈಕಿ ಒಬ್ಬರಲ್ಲೊಬ್ಬರು ಸಚಿವರಾಗಿದ್ದರು. 2004ರಲ್ಲಿ ಧರ್ಮಸಿಂಗ್‌ ಅವರ ಕಾಂಗ್ರೆಸ್‌ ಸರ್ಕಾರದಲ್ಲಿ ಸತೀಶ ಸಚಿವರಾಗಿದ್ದರು. ಜವಳಿ ಖಾತೆ ಹೊಂದಿದ್ದರು. 2006ರಲ್ಲಿ ಬಿಜೆಪಿ– ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಬಾಲಚಂದ್ರ ಸಮಾಜ ಕಲ್ಯಾಣ ಸಚಿವರಾಗಿದ್ದರು. ಆಗ ಅವರ ಜೆಡಿಎಸ್‌ನಲ್ಲಿದ್ದರು. 2008ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ಸಚಿವರಾಗಿ ಮುಂದುವರಿದರು.

ADVERTISEMENT

2013ರಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಸತೀಶ ಅಬಕಾರಿ ಸಚಿವರಾದರು. ನಂತರ ಸಣ್ಣ ಕೈಗಾರಿಕಾ ಖಾತೆ ಬದಲಾಯಿಸಿಕೊಂಡರು. ಕೆಲವು ತಿಂಗಳ ನಂತರ ಸಚಿವ ಸ್ಥಾನ ರಮೇಶ ಅವರಿಗೆ ದೊರೆಯಿತು. ಸಹಕಾರ ಖಾತೆ ಪಡೆದರು. 2018ರಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ರಮೇಶ ಅವರು ಸಚಿವರಾಗಿ ಮುಂದುವರಿದರು. ಪೌರಾಡಳಿತ ಖಾತೆ ನಿರ್ವಹಿಸಿದರು. ಪಕ್ಷದ ಚಟುವಟಿಕೆಗಳಿಂದ ದೂರ ಉಳಿದ ಕಾರಣ ಅವರ ಸಚಿವ ಸ್ಥಾನ ಕಿತ್ತುಕೊಂಡು, ಸತೀಶ ಅವರಿಗೆ ನೀಡಲಾಯಿತು. ಅರಣ್ಯ ಖಾತೆ ವಹಿಸಲಾಗಿತ್ತು.

ಮುಳುವಾಯಿತೇ ಹೇಳಿಕೆ?:

‘ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಕೊಡದಿದ್ದರೆ ಸರ್ಕಾರವನ್ನೇ ಕೆಡುವುತ್ತೇನೆ’ ಎಂದು ಇತ್ತೀಚೆಗೆ ಬಾಲಚಂದ್ರ ಅವರು ಮೂಡಲಗಿ ತಾಲ್ಲೂಕಿನ ತಿಗಡಿಯಲ್ಲಿ ಹೇಳಿದ್ದರು. ಇದಲ್ಲದೇ, 2011ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಸಚಿವ ಸಂಪುಟದ ಪುನರ್‌ರಚನೆ ವೇಳೆ ಬಾಲಚಂದ್ರ ಅವರನ್ನು ಕೈಬಿಟ್ಟಿದ್ದರು. ಇದನ್ನು ವಿರೋಧಿಸಿ ಅವರು, ದಂಗೆ ಎದ್ದಿದ್ದರು. ಮತ್ತೆ ಇಂತಹ ಪ್ರಸಂಗಗಳು ಎದುರಾದರೆ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ ಎನ್ನುವ ಕಾರಣಕ್ಕಾಗಿ ಅವರನ್ನು ಕೈಬಿಟ್ಟಿರಬಹುದು’ ಎಂದು ಅವು ಹೇಳಿವೆ.

ಒಂದು ಕುಟುಂಬಕ್ಕೆ ಒಂದೇ ಸಚಿವ ಸ್ಥಾನ:

ಒಂದು ಕುಟುಂಬಕ್ಕೆ ಒಂದೇ ಸಚಿವ ಸ್ಥಾನ ನೀಡಲು ಪಕ್ಷ ಕೈಗೊಂಡಿರುವ ತೀರ್ಮಾನವೇ ಇದಕ್ಕೆ ಕಾರಣ ಎನ್ನುತ್ತಾರೆ ಪಕ್ಷದ ಹಿರಿಯ ಸದಸ್ಯರೊಬ್ಬರು.

‘ಬಿಜೆಪಿ ಸರ್ಕಾರ ರಚನೆಯಾಗಲು ರಮೇಶ ಜಾರಕಿಹೊಳಿ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ ಸಚಿವ ಸ್ಥಾನ ಕಾಯ್ದಿರಿಸಿರುವುದರಿಂದಲೇ ಬಾಲಚಂದ್ರ ಅವರಿಗೆ ನೀಡಲಾಗಿಲ್ಲ. ಒಂದು ಕುಟುಂಬಕ್ಕೆ ಒಂದೇ ಸಚಿವ ಸ್ಥಾನ ನೀಡಲು ಹೈಕಮಾಂಡ್‌ ತೀರ್ಮಾನ ಕೈಗೊಂಡಿದ್ದೆ ಇದಕ್ಕೆ ಕಾರಣ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.