ADVERTISEMENT

ಅಲೆಮಾರಿಗಳಿಗೆ ಪ್ರತ್ಯೇಕ ನಿಗಮ ಅಸಾಧ್ಯ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 15:59 IST
Last Updated 11 ಮಾರ್ಚ್ 2022, 15:59 IST
ಶಾಂತಾರಾಮ ಸಿದ್ದಿ
ಶಾಂತಾರಾಮ ಸಿದ್ದಿ   

ಬೆಂಗಳೂರು: ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವುದು ಅಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಶನಿವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಶಾಂತಾರಾಮ ಬುಡ್ನ ಸಿದ್ದಿ, ‘ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದ ಬದಲಿಗೆ ಪ್ರತ್ಯೇಕವಾದ ನಿಗಮ ಸ್ಥಾಪಿಸಬೇಕು. ಆ ಮೂಲಕ ಈ ಸಮುದಾಯಗಳ ಅಭಿವೃದ್ಧಿ ಯೋಜನೆಗಳನ ಅನುಷ್ಠಾನಕ್ಕೆ ವೇಗ ನೀಡಬೇಕು’ ಎಂದು ಒತ್ತಾಯಿಸಿದರು.

‘ಜಾತಿಗೊಂದು ನಿಗಮ ಸ್ಥಾಪಿಸುವುದಕ್ಕೆ ಹೈಕೋರ್ಟ್‌ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಇನ್ನೂ ಹೆಚ್ಚಿನ ನಿಗಮಗಳ ಸ್ಥಾಪನೆ ಕಷ್ಟ’ ಎಂದು ಸಚಿವರು ಹೇಳಿದರು.

ADVERTISEMENT

ಅಲೆಮಾರಿ, ಅಲೆಮಾರಿ ವಿದ್ಯಾರ್ಥಿಗಳಿಗಾಗಿ ₹ 30 ಕೋಟಿ ವೆಚ್ಚದಲ್ಲಿ ಒಂಬತ್ತು ವಸತಿ ನಿಲಯಗಳನ್ನು ತೆರೆಯಲಾಗುವುದು. ಈ ವರ್ಷವೇ ಈ ವಸತಿ ನಿಲಯಗಳು ಆರಂಭವಾಗಲಿವೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಈ ಸೌಲಭ್ಯ ನೆರವಾಗಲಿದೆ ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 51, ಪರಿಶಿಷ್ಟ ಪಂಗಡದ 23 ಮತ್ತು ಹಿಂದುಳಿದ ವರ್ಗಗಳ 46 ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳಿವೆ. ಈ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.