ADVERTISEMENT

ಪರಿಶಿಷ್ಟ ಪಂಗಡದ ಮೀಸಲಾತಿಗೆ ಕುರುಬರ ಹೋರಾಟ; ‘ಸಿದ್ದರಾಮಯ್ಯ ವಿರೋಧವಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 18:54 IST
Last Updated 4 ಜನವರಿ 2021, 18:54 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಸಿಂಧನೂರು (ರಾಯಚೂರು ಜಿಲ್ಲೆ): ‘ಕುರುಬ ಸಮಾಜಕ್ಕೆ ಎಸ್‍.ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಲು ಪಕ್ಷಾತೀತವಾಗಿ ಕುರುಬ ಸಮಾಜದ ಎಲ್ಲ ನಾಯಕರು ಒಂದಾಗಿದ್ದೇವೆ. ಈ ಹೋರಾಟಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರೋಧವಿಲ್ಲ’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಸೋಮವಾರ ಇಲ್ಲಿ ನಡೆದ ಸಮಾಜದ ವಿಭಾಗೀಯ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದ ಸ್ವಾಮೀಜಿಗಳು ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸುವಂತೆ ಕೋರಿದ್ದಾರೆ. ನಾನು ಕೂಡ ವೈಯಕ್ತಿಕವಾಗಿ ಅವರನ್ನು ಹೋರಾಟಕ್ಕೆ ಆಹ್ವಾನಿಸಿ
ದ್ದೇನೆ. ಹೋರಾಟಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಅವರೂ ತಿಳಿಸಿದ್ದಾರೆ. ಹೀಗಾಗಿ ಹೋರಾಟ ದಾರಿ ತಪ್ಪುವ ಪ್ರಶ್ನೆಯೇ ಇಲ್ಲ’ ಎಂದರು.

‘ರಾಜಕೀಯ ಒತ್ತಡದ ಕೊರತೆ ಯಿಂದಾಗಿ ಈ ಮೀಸಲಾತಿ ಸಿಕ್ಕಿಲ್ಲ. ಈಗ ರಾಜಕೀಯ ಒತ್ತಡ ಹೇರುತ್ತೇವೆ. ಜ. 15ರಿಂದ ಕಾಗಿನೆಲೆಯಿಂದ ಶ್ರೀಗಳ ನೇತೃತ್ವದ ಪಾದಯಾತ್ರೆ ಆರಂಭ ವಾಗಲಿದೆ. ಬೆಂಗಳೂರಲ್ಲಿ 10 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದ್ದು, ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳುವ ಭರವಸೆ ಇದೆ’ ಎಂದೂ ಅವರು ಹೇಳಿದರು.

ADVERTISEMENT

‘ಈ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಹೋಗಿದೆ. ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್‍ ಶಾ ಅವರ ಗಮನಸೆಳೆದು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಲಾಗುವುದು’ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.