ಬೆಂಗಳೂರು: ‘ಬಿಜೆಪಿ- ಜೆಡಿಎಸ್‌ನವರು ಹಮ್ಮಿಕೊಂಡಿರುವ ಪಾದಯಾತ್ರೆಗೆ ಪೊಲೀಸ್ ಇಲಾಖೆಯಿಂದ ಅಧಿಕೃತವಾಗಿ ಅನುಮತಿ ನೀಡುವುದಿಲ್ಲ. ಯಾರಿಗೂ ತೊಂದರೆ ಮಾಡದೆ ಪಾದಯಾತ್ರೆ ಮಾಡುವುದಾದರೆ ಮಾಡಲಿ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಆಗಸ್ಟ್ 3ರಿಂದ ಪಾದಯಾತ್ರೆ ನಡೆಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.
ಈ ಕುರಿತು ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಪರಮೇಶ್ವರ, ‘ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ಹಮ್ಮಿಕೊಂಡಿದ್ದ ಪಾದಯಾತ್ರೆಗೂ ಅನುಮತಿ ಕೊಟ್ಟಿರಲಿಲ್ಲ. ಆದರೂ ನಾವೂ ಮಾಡಿದ್ದೇವೆ. ಅನುಮತಿ ನೀಡಿದರೆ ಕಾನೂನು ಸಮಸ್ಯೆಗಳು ಆಗಲಿವೆ. ಜನರಿಗೆ ತೊಂದರೆ ಕೊಡದೆ ಅವರು ಪಾದಯಾತ್ರೆ ನಡೆಸಲಿ. ಪಾದಯಾತ್ರೆಗೆ ಏನು ವ್ಯವಸ್ಥೆ ಬೇಕೊ ಅದನ್ನು ಮಾಡಿಕೊಡುತ್ತೇವೆ’ ಎಂದರು.
‘ವಿರೋಧ ಪಕ್ಷಗಳ ಪಾದಯಾತ್ರೆಗೆ ಪ್ರತಿಯಾಗಿ ನಾವು ಕೂಡಾ ಪಕ್ಷದ ಮೂಲಕ ರಣತಂತ್ರ ರೂಪಿಸುತ್ತೇವೆ’ ಎಂದೂ ಹೇಳಿದರು.
ತಾರತಮ್ಯ ಧೋರಣೆ ತೋರಿಸಿದರೆ ಹೇಗೆ?: ‘ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ’ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಯುಪಿಎ, ಎನ್‌ಡಿಎ ಅವಧಿಯ ಅನುದಾನವನ್ನು ಹೋಲಿಕೆ ಮಾಡುವುದು ಸರಿಯಲ್ಲ. ಹಿಂದೆ ಬಜೆಟ್ ಗಾತ್ರ ಎಷ್ಟಿತ್ತು, ಈಗ ಎಷ್ಟಾಗಿದೆ ಎನ್ನುವುದನ್ನು ನೋಡಬೇಕು. ಆಂಧ್ರಪ್ರದೇಶಕ್ಕೆ ₹15 ಸಾವಿರ ಕೋಟಿ ಕೊಟ್ಟಿದ್ದಾರೆ. ಕೊಡುವುದು ಬೇಡ ಎಂದಲ್ಲ, ಸರಿ ಸಮವಾಗಿ ಕೊಡಬೇಕು. ರಾಜ್ಯಗಳ ಮಧ್ಯೆ ತಾರತಮ್ಯ ಧೋರಣೆ ತೋರಿಸಿದರೆ ಹೇಗೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.