ADVERTISEMENT

ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಬೇಡ: ನಾವು ನ್ಯಾಯದ ಪರ; ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 6:59 IST
Last Updated 23 ಆಗಸ್ಟ್ 2025, 6:59 IST
   

ಬೆಂಗಳೂರು: ‘ಧರ್ಮಸ್ಥಳ ವಿಚಾರದಲ್ಲಿ ನಾವು (ಸರ್ಕಾರ) ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರು ಇದುವರೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ನಾನು ‘ಷಡ್ಯಂತ್ರ’ ವಿಚಾರ ಪ್ರಸ್ತಾವ ಮಾಡಿದ ನಂತರ ಅವರು ಮಾತನಾಡುತ್ತಿದ್ದಾರೆ’ ಎಂದರು.

‘ಧರ್ಮಸ್ಥಳದ ಕುಟುಂಬದವರೇ ಬಂದು ಮುಖ್ಯಮಂತ್ರಿಯ ಬಳಿ, ಎಸ್‌ಐಟಿ ರಚಿಸಿರುವುದು ಒಳ್ಳೆಯ ಕೆಲಸ ಎಂದಿದ್ದಾರೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರೂ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸದನದಲ್ಲಿಯೇ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಹೇಳಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಮುಖ್ಯಮಂತ್ರಿ ಈ ಬಗ್ಗೆ ತಿಳಿಸಿದ್ದಾರೆ’ ಎಂದರು.

ADVERTISEMENT

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜೊತೆ ಸಭೆ ನಡೆಸಿದ ಬಗ್ಗೆ ಕೇಳಿದಾಗ, ‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸಬೇಕಲ್ಲವೇ? ಹೀಗಾಗಿ ಸಭೆ ಕರೆದು ಜವಾಬ್ದಾರಿ ಹಂಚಿಕೆ ಮಾಡುತ್ತಿದ್ದೇವೆ. ನ್ಯಾಯಾಲಯ ಚುನಾವಣೆ ನಡೆಸಿ ಎಂದ ಮೇಲೆ ಕಡೆಗಣಿಸಬಾರದಲ್ಲವೇ’ ಎಂದರು.

ಡಿಕೆಶಿ ನೇತೃತ್ವದಲ್ಲಿ ಶಾಸಕರು ಬಿಹಾರಕ್ಕೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಮತ ಜನಾಧಿಕಾರ ಯಾತ್ರೆ’ಯಲ್ಲಿ ಭಾಗವಹಿಸಲು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ನಾಯಕರು ವಿಶೇಷ ವಿಮಾನದಲ್ಲಿ ಬಿಹಾರಕ್ಕೆ ಶನಿವಾರ ತೆರಳಿದರು.

ಶಾಸಕರಾದ ಶ್ರೀನಿವಾಸ ಮಾನೆ, ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ರಿಜ್ವಾನ್ ಅರ್ಷದ್, ಬಿ.ಎಂ. ನಾಗರಾಜ್, ನಯನಾ ಮೋಟಮ್ಮ, ಅಶೋಕ್ ಪಟ್ಟಣ, ಕೆ.ಎಂ. ಆನಂದ್, ವೇಣುಗೋಪಾಲ್ ನಾಯಕ್, ಬಸನಗೌಡ ಬಾದರ್ಲಿ, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಬಿ. ವಿ ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ತಂಡದಲ್ಲಿದ್ದರು.

‘ಮುಖ್ಯಮಂತ್ರಿ ಇನ್ನೊಂದು ದಿನ ಬಿಹಾರಕ್ಕೆ ತೆರಳಲಿದ್ದಾರೆ’ ಎಂದೂ ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.