ADVERTISEMENT

ಲೋಕಸಭೆಗೆ ಸ್ಪರ್ಧಿಸಲು ಒತ್ತಡವಿಲ್ಲ: ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 13:20 IST
Last Updated 20 ಜನವರಿ 2024, 13:20 IST
<div class="paragraphs"><p>ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

ಬೆಳಗಾವಿ: ‘ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ದೆಹಲಿಯಲ್ಲಿ ನಡೆದ ಪಕ್ಷದ ಹೈಕಮಾಂಡ್‌ ಸಭೆಯಲ್ಲಿ ಇಂಥ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತರೆ ನಮ್ಮ ಸಚಿವ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬುದು ಬರೀ ಸುಳ್ಳು. ಇಂಥ ಯಾವ ಮಾತುಗಳನ್ನು ಯಾರೂ ಹೇಳಿಲ್ಲ. ಹೆಚ್ಚು ಸ್ಥಾನ ಗೆಲ್ಲಿಸಲು ಸಚಿವರು ಶ್ರಮಿಸಬೇಕು ಎಂಬುದು ನಿಜ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ರಾಜ್ಯದ ಎಲ್ಲ 28 ಸ್ಥಾನಗಳನ್ನೂ ಗೆಲ್ಲಬೇಕೆಂಬ ಹಂಬಲ ನಮಗಿದೆ. ಆದರೆ, ಎಂಟು ಕ್ಷೇತ್ರಗಳಲ್ಲಿ ನಮ್ಮ ಬಲ ಕಡಿಮೆ. 20ರಲ್ಲಿ ಗೆಲುವು ಸಾಧಿಸಲು ಶ್ರಮಪಡುತ್ತೇವೆ’ ಎಂದರು.

‘ಬೆಳಗಾವಿ ಕ್ಷೇತ್ರದಲ್ಲಿ 10, ಚಿಕ್ಕೋಡಿ ಕ್ಷೇತ್ರದಲ್ಲಿ 6 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನು 15 ದಿನಗಳ ಒಳಗಾಗಿ ಅಭ್ಯರ್ಥಿಗಳ ಪ್ರಾಥಮಿಕ ಪಟ್ಟಿ ಸಿದ್ಧಪಡಿಸುತ್ತೇವೆ. ಕೊನೆಯದಾಗಿ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ವಿವಿಧ ಸಮುದಾಯಗಳ ಅಭ್ಯರ್ಥಿಗಳಿಗೆ ಟಿಕೆಟ್‌ ಸಿಗುತ್ತದೆ. ಕೆಲವು ಕಡೆ ಅಚ್ಚರಿ ಅಭ್ಯರ್ಥಿಗಳೂ ಬರಲಿದ್ದಾರೆ. ಈಗಾಗಲೇ ಕಾಂಗ್ರೆಸ್‌ ನಾಯಕರು ಹಾಗೂ ಮುಖ್ಯಮಂತ್ರಿ ಅವರ ತಂಡ ಆಂತರಿಕ ಸಮೀಕ್ಷೆ ನಡೆಸಿದೆ. ಅದರ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ಸಿಗಲಿದೆ’ ಎಂದರು.

‘ಬಿಜೆಪಿಯವರು ರಾಮ ಮಂದಿರ ಇಟ್ಟುಕೊಂಡು ರಾಜಕೀಯ ಮಾಡುವುದು ಹೊಸದೇನಲ್ಲ. ಮಂದಿರ ಉದ್ಘಾಟನೆಯಿಂದ ಅವರಿಗೆ ಲಾಭವಾಗುತ್ತದೆ ಎಂಬುದು ಭ್ರಮೆ. ಅಪೂರ್ಣ ಮಂದಿರ ಉದ್ಘಾಟನೆ ಮಾಡಬಾರದು ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಅವರ ವಿರೋಧದ ಹೊರತಾಗಿಯೂ ಉದ್ಘಾಟನೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ದೇವಾಲಯದ ವಾಸ್ತುಶಿಲ್ಪಿ ಎಂಬಂತೆ ಬಿಂಬಿಸಲಾಗುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಂದಿರ ಉದ್ಘಾಟನೆಗೆ ಹೋಗದ ಕಾಂಗ್ರೆಸ್ಸಿಗರು ಹಿಂದೂ ವಿರೋಧಿಗಳಲ್ಲ. ಜ.22ರಂದು ಬೇಡ ನಂತರ ಬನ್ನಿ ಎಂದು ಪ್ರಧಾನಿಯೇ ಹೇಳಿದ್ದಾರೆ. ನಾವು ನಮ್ಮ ಅನುಕೂಲ ನೋಡಿಕೊಂಡು ಭೇಟಿ ನೀಡುತ್ತೇವೆ’ ಎಂದರು.

‘ವಿವಿಧ ಸಮುದಾಯಗಳಿಗೆ ನ್ಯಾಯ ಕಲ್ಪಿಸಲು ಇನ್ನಷ್ಟು ಉಪಮುಖ್ಯಮಂತ್ರಿ ಹುದ್ದೆ ಸೃಜಿಸುವ ಬಗ್ಗೆ, ಲೋಕಸಭೆ ಚುನಾವಣೆಯ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ. ಮಂಡಳಿ, ನಿಗಮಗಳಿಗೆ ಅಧ್ಯಕ್ಷರ ನೇಮಕ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.