ADVERTISEMENT

ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೆ ಒತ್ತಾಯ

ಎಐಡಿವೈಒ ಸಂಘಟನೆಯಿಂದ ಇದೇ 25ರಂದು ರಾಜ್ಯದಾದ್ಯಂತ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 14:33 IST
Last Updated 22 ಜೂನ್ 2020, 14:33 IST

ಕಲಬುರ್ಗಿ: ಅತಿಥಿ ಉಪನ್ಯಾಸಕರನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದ್ದು, ಮೂರು ತಿಂಗಳಿಂದ ಕನಿಷ್ಠ ಸಂಬಳವನ್ನೂ ಕೊಟ್ಟಿಲ್ಲ. ಇದನ್ನು ಖಂಡಿಸಿ ಅಖಿಲ ಭಾರತ ಪ್ರಜಾಸತ್ತಾತ್ಮ ಯುವಜನ ಸಂಘಟನೆ (ಎಐಡಿವೈಒ) ವತಿಯಿಂದ ಇದೇ 25ರಂದು ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್‌.ಎಚ್‌. ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ. ಸಂಬಳ ಇಲ್ಲದ್ದರಿಂದ ಕೈಯಿಂದಲೇ ಖರ್ಚು ಭರಿಸುತ್ತಾ, ಆನ್‌ಲೈನ್‌ ತರಗತಿಗಳನ್ನೂ ನಿಭಾಯಿಸುತ್ತಿದ್ದಾರೆ. 2019ರ ಜನವರಿಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸುತ್ತೋಲೆಯೊಂದನ್ನು ಹೊರಡಿಸಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಿರ್ವಹಿಸುತ್ತಿರುವ ಪ್ರತಿ ಬೋಧನಾ ಅವಧಿಗೆ ₹ 1500 ಅಥವಾ ಮಾಸಿಕ ₹ 50 ಸಾವಿರ ವೇತನ ನಿಗದಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ, ಇಂದಿಗೂ ನೆಟ್‌, ಸೆಟ್‌, ಪಿಎಚ್‌.ಡಿ. ಆದವರಿಗೆ ₹ 13 ಸಾವಿರ ಹಾಗೂ ಉಳಿದವರಿಗೆ ₹ 11 ಸಾವಿರ ಸಂಬಳ ಸಿಗುತ್ತಿದೆ. ಅದನ್ನೂ ಮೂರು ತಿಂಗಳಿಂದ ಬಿಡುಗಡೆ ಮಾಡಿಲ್ಲ’ ಎಂದು ಟೀಕಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಣ್ಣ ಎಸ್‌. ಜಂಬಗಿ ಮಾತನಾಡಿ, ‘ಲಾಕ್‌ಡೌನ್‌ ಅವಧಿಯಲ್ಲಿ ಉದ್ಯೋಗಿಗಳಿಗೆ ಸಂಬಳ ನಿಲ್ಲಿಸಬಾರದು ಎಂದು ಸರ್ಕಾರ ಹೇಳುತ್ತದೆ. ಆದರೆ, ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಿಗೆ ಮಾರ್ಚ್‌ 24ರಿಂದ ಇಲ್ಲಿಯವರೆಗೆ ಸಂಬಳ ನೀಡಿಲ್ಲ. ಹೀಗಾದರೆ, ಬೆಲೆ ಏರಿಕೆಯ ಈ ದಿನಗಳಲ್ಲಿ ಶಿಕ್ಷಕರು ಬದುಕುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

ಅತಿಥಿ ಶಿಕ್ಷಕ ಶಿವಕುಮಾರ ವಿ.ಕೆ., ಸಂಘಟನೆಯ ಮುಖಂಡರಾದ ಮಲ್ಲಿನಾಥ ಹುಂಡೆಕಲ್, ಶರಣು ವಿ.ಕೆ., ಈಶ್ವರ ಈ.ಕೆ., ಅಂಬಿಕಾ ಎಸ್‌.ಜಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.