ADVERTISEMENT

ಪ್ರತ್ಯೇಕ ರಾಜ್ಯದ ಪ್ರಸ್ತಾವ ಇಲ್ಲ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 18:30 IST
Last Updated 23 ಜೂನ್ 2022, 18:30 IST
   

ನವದೆಹಲಿ: ‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ, ವಿಚಾರ ಹಾಗೂ ಪ್ರಸ್ತಾವವು ಸರ್ಕಾರದ ಮಟ್ಟದಲ್ಲಿ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸ್ಪಷ್ಟಪಡಿಸಿದರು.

ಕರ್ನಾಟಕ ಭವನದಲ್ಲಿ ಸುದ್ಧಿಗಾರರ ಜತೆಗೆ ಗುರುವಾರ ಮಾತನಾಡಿದಅವರು, ‘ಸಚಿವ ಉಮೇಶ ಕತ್ತಿ ಅವರು ಈ ರೀತಿ ಹೇಳಿಕೆ ನೀಡಿರುವುದು ಮೊದಲ ಬಾರಿಯೇನಲ್ಲ. ಹತ್ತು ಹಲವಾರು ವರ್ಷಗಳಿಂದ ಇಂತಹ ಹೇಳಿಕೆ ನೀಡುತ್ತಲ್ಲೇ ಬಂದಿದ್ದಾರೆ. ಅದಕ್ಕೆ ಅವರೇ ಉತ್ತರ ನೀಡಬೇಕು’ ಎಂದರು.

ವರಿಷ್ಠರ ಭೇಟಿ ಇಲ್ಲ: ‘ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿರಬೇಕು ಎಂದು ವರಿಷ್ಠರು ಸೂಚನೆ ನೀಡಿದ್ದಾರೆ. ಸೂಚಕರಾಗಿಯೂ ಸಹಿ ಹಾಕುವಂತೆ ನಿರ್ದೇಶನ ನೀಡಿದ್ದಾರೆ. ಅದಕ್ಕಾಗಿ ದೆಹಲಿಗೆ ಬಂದಿದ್ದೇನೆ’ ಎಂದು ಬೊಮ್ಮಾಯಿ ಹೇಳಿದರು.

ADVERTISEMENT

‘ರಾಷ್ಟ್ರಪತಿ ಚುನಾವಣೆಯ ಕಡೆಗೆ ಪಕ್ಷದ ವರಿಷ್ಠರು ಹೆಚ್ಚಿನ ಗಮನ ಹರಿಸಿದ್ದಾರೆ. ಹೀಗಾಗಿ, ಸಂಪುಟ ವಿಸ್ತರಣೆ ಸಂಬಂಧ ಅವರನ್ನು ಭೇಟಿ ಮಾಡುತ್ತಿಲ್ಲ. ಕೇಂದ್ರ ಸಚಿವರನ್ನು ಸಹ ಭೇಟಿ ಮಾಡುತ್ತಿಲ್ಲ’ ಎಂದರು.

‘ನಾನು ಪ್ರತಿ ಬಾರಿ ದೆಹಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಯಾಗುತ್ತದೆ.ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನಾಗಿ ಅಧಿಕೃತವಾಗಿ ಹೇಳುವವರೆಗೆ ಏನೂ ಇರುವುದಿಲ್ಲ’ ಎಂದರು.

ಯೋಗೇಶ್ವರ ಲಾಬಿ: ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ ಅವರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ವಾಸ್ತವ್ಯ ಹೂಡಿ ವರಿಷ್ಠರ ಭೇಟಿಗೆ ಪ್ರಯತ್ನ ನಡೆಸಿದ್ದಾರೆ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರ ಹಸಿರು ನಿಶಾನೆ ದೊರಕಬಹುದು ಎಂಬ ನಿರೀಕ್ಷೆಯಲ್ಲಿರುವ ಅವರು, ಸಂಪುಟ ಸೇರ್ಪಡೆಗಾಗಿ ಪ್ರಯತ್ನ
ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.