ADVERTISEMENT

ಸೋಗಿ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಜನಜಾತ್ರೆ; ಸಾಮಾಜಿಕ ಅಂತರಕ್ಕಿಲ್ಲ ಬೆಲೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 6:08 IST
Last Updated 29 ಮಾರ್ಚ್ 2020, 6:08 IST
   

ಹೊಸಪೇಟೆ: ಕೊರೊನಾ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತವು ನಗರದ ಏಳು ಕಡೆಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಗಳಿಗೆ ವ್ಯವಸ್ಥೆ ಮಾಡಿದೆ. ಆದರೆ, ಜನ ಆ ಕಡೆ ಸುಳಿಯುತ್ತಿಲ್ಲ.

ಜನರ ಸುರಕ್ಷತೆಯ ದೃಷ್ಟಿಯಿಂದ ಸ್ಥಾಪಿಸಿರುವ ತರಕಾರಿ ಮಾರುಕಟ್ಟೆಗಳತ್ತ ಜನ ಸುಳಿಯದ ಕಾರಣ ಸೋಗಿ ಮಾರುಕಟ್ಟೆಯಲ್ಲಿ ಭಾನುವಾರ ಹೆಚ್ಚಿನ ಜನಸಂದಣಿ ಕಂಡು ಬಂತು. ಯಾರೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಪರಸ್ಪರ ಹತ್ತಿರ ನಿಂತುಕೊಂಡೇ ತರಕಾರಿ, ಹಣ್ಣು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಜನ ಸೋಗಿ ಮಾರುಕಟ್ಟೆಗೆ ಬಂದದ್ದರಿಂದ ನಗರಸಭೆ ಎದುರಿನ ಮುಖ್ಯರಸ್ತೆಯಲ್ಲಿ ಜನಜಂಗುಳಿ ಕಂಡು ಬಂತು. ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರೂ ಅವುಗಳನ್ನು ಬದಿಗೆ ಸರಿಸಿ ಜನ ಓಡಾಡಿದರು.

ADVERTISEMENT

ಉದ್ಯೋಗ ಪೆಟ್ರೋಲ್‌ ಬಂಕ್‌ನಲ್ಲೂ ಜನಜಾತ್ರೆ ಕಂಡು ಬಂತು. ವಿವಿಧ ಕಡೆಗಳಿಂದ ವಾಹನ ಸವಾರರು ಬಂದು ಸಾಲಿನಲ್ಲಿ ನಿಂತುಕೊಂಡು ಪೆಟ್ರೋಲ್‌, ಡೀಸೆಲ್‌ ಹಾಕಿಸಿಕೊಂಡರು.

ಮುನ್ಸಿಪಲ್‌ ಮೈದಾನ, ಬಳ್ಳಾರಿ ರಸ್ತೆಯ ಪಟೇಲ್‌ ಹೈಸ್ಕೂಲ್‌ ಗ್ರೌಂಡ್‌, ಪಿ.ವಿ.ಎಸ್‌.ಬಿ.ಸಿ. ಶಾಲೆ, ಟಿ.ಬಿ. ಡ್ಯಾಂ ಜೂನಿಯರ್‌ ಕಾಲೇಜು ಮೈದಾನ, ದೀಪಾಯನ ಶಾಲೆ, ಸೋಗಿ ಮಾರುಕಟ್ಟೆ ಹಾಗೂ ಎಂ.ಜೆ. ನಗರ ಪಾನಿ ಪೂರಿ ಮಾರಾಟ ಮಾಡುವ ಸ್ಥಳಗಳಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.