ADVERTISEMENT

ವೆಂಟಿಲೇಟರ್ ಸಿಗದಿದ್ದುದಕ್ಕೆ ಕಾರಿನಲ್ಲೇ ಪ್ರಾಣಬಿಟ್ಟ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 18:18 IST
Last Updated 21 ಏಪ್ರಿಲ್ 2021, 18:18 IST
   

ಕಲಬುರ್ಗಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ, ಜೀವ ರಕ್ಷಕ ವೆಂಟಿಲೇಟರ್ ಇರುವ ಬೆಡ್ ಸಿಗದೇ ಇರುವುದಕ್ಕೆ ಬುಧವಾರ ನಗರದ ಖಾಸಗಿ ಆಸ್ಪತ್ರೆಯ ಎದುರಿನಲ್ಲೇ ಪ್ರಾಣ ಬಿಟ್ಟಿದ್ದಾರೆ.

ಕಾಳಗಿ ಪಟ್ಟಣದ ಶಂಕರ (50) ಮೃತಪಟ್ಟವರು. ನಗರದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಸುಮಾರು ನಾಲ್ಕು ಗಂಟೆ ಸುತ್ತಾಡಿದರೂ ಬೆಡ್‌ಗಳು ಖಾಲಿ ಇರಲಿಲ್ಲ ಎನ್ನಲಾಗಿದೆ. ಮಧ್ಯಾಹ್ನದ ವೇಳೆಗೆ ನಗರದ ಸತ್ಯ ಆಸ್ಪತ್ರೆಯಲ್ಲಿ ಬೆಡ್‌ ಖಾಲಿ ಇರುವ ಬಗ್ಗೆ ವಿಚಾರಿಸಿಕೊಂಡು ಬರುವಷ್ಟರಲ್ಲಿ ಕಾರಿನಲ್ಲೇ ಪ್ರಾಣಬಿಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶಂಕರ್ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ‘ವೆಂಟಿಲೇಟರ್‌ ಬೆಡ್‌ ಸಿಗದೇ ಇದ್ದುದಕ್ಕೆ ರೋಗಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇಲ್ಲ. ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ 40 ವೆಂಟಿಲೇಟರ್‌ ಸೇರಿದಂತೆ 400 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್‌ ಹಾಗೂ ಕೋವಿಡ್ ಅಲ್ಲದ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ತಾಲ್ಲೂಕು ಕೇಂದ್ರಗಳಲ್ಲಿಯೂ ಆಕ್ಸಿಜನ್ ಸಿಲಿಂಡರ್‌ ಹೊಂದಿದ ತಲಾ 10 ಹಾಸಿಗೆಗಳನ್ನು ಸಜ್ಜುಗೊಳಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.