
ಬೆಂಗಳೂರು: ದೂರಸಂಪರ್ಕ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ನೋಕಿಯಾ ಕಾರ್ಪೊರೇಷನ್ ‘ಜಾಗತಿಕ ಸಾಮರ್ಥ್ಯ ಕೇಂದ್ರ’ (ಜಿಸಿಸಿ) ಮತ್ತು ಸಂಶೋಧನಾ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ಒಲವು ವ್ಯಕ್ತಪಡಿಸಿದೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ನೋಕಿಯಾದ ಉನ್ನತಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ, ಕಂಪನಿಯ ಭವಿಷ್ಯದ ವಿಸ್ತರಣಾ ಉಪಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
‘ಸೈಬರ್ ಸುರಕ್ಷತೆಯ ಜಾಗತಿಕ ಕಂಪನಿ ಕ್ಲೌಡ್‌ಫ್ಲೇರ್‌ನ ಜೊತೆಗಿನ ಸಭೆಯಲ್ಲಿ ‘ಕ್ವಿನ್ ಸಿಟಿʼ ಯೋಜನೆಯ ಭಾಗವಾಗುವ ಹಾಗೂ ವಿಸ್ತರಣೆ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗಿದೆ. ಕಂಪನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರದ ನೆರವಿನ ಭರವಸೆ ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಆಕರ್ಷಿಸುವುದರಲ್ಲಿ ಕರ್ನಾಟಕವು ಜಾಗತಿಕವಾಗಿ ಅತ್ಯುತ್ತಮ ತಾಣವಾಗಿದೆಯೆಂದು ಕಂಪನಿಯ ಜಾಗತಿಕ ಕಾರ್ಯತಂತ್ರ ಮುಖ್ಯಸ್ಥ ಸ್ಟೆಫಾನಿ ಕೊಹೆನ್ ಅವರು ಗುಣಗಾನ ಮಾಡಿದ್ದಾರೆ’ ಎಂದು ಸಚಿವರು ತಿಳಿಸಿದ್ದಾರೆ.
ಪಾಲುದಾರಿಕೆಗೆ ವಾಸ್ಟ್ ಸ್ಪೇಸ್ ಒಲವು: ಬಾಹ್ಯಾಕಾಶ ತಂತ್ರಜ್ಞಾನ, ಅತ್ಯಾಧುನಿಕ ತಯಾರಿಕೆ ಮತ್ತು ನಾವೀನ್ಯ ಆಧಾರಿತ ಉಪಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಅಮೆರಿಕದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ವಾಸ್ಟ್ ಸ್ಪೇಸ್ ಒಲವು ತೋರಿಸಿದೆ. ಯುಎಇ ಮೂಲದ ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಕ್ರೆಸೆಂಟ್ ಎಂಟರ್‌ಪ್ರೈಸಸ್, ರಾಜ್ಯದ ಉದ್ದಿಮೆ ಹಾಗೂ ಕಂಪನಿಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದರು.
ಒಪ್ಪಂದಕ್ಕೆ ಆಸಕ್ತಿ: ರಾಜ್ಯ ಸರ್ಕಾರದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಮೆರಿಕದ ವೈಮಾಂತರಿಕ್ಷ ಕಂಪನಿ ವೊಯೆಜರ್ ಟೆಕ್ನಾಲಜೀಸ್ ಕಂಪನಿ ಆಸಕ್ತಿ ವ್ಯಕ್ತಪಡಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.