ADVERTISEMENT

ಉತ್ತರ ಕರ್ನಾಟಕ ಅಭಿವೃದ್ಧಿ: ಗೋವಿಂದರಾವ್ ವರದಿ ಜಾರಿಗೆ ಬದ್ಧ; ಸಿದ್ದರಾಮಯ್ಯ

ಆಲಮಟ್ಟಿ: ಒಂದೇ ಹಂತದಲ್ಲಿ ಭೂಸ್ವಾಧೀನಕ್ಕೆ ಕ್ರಮ– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 16:16 IST
Last Updated 19 ಡಿಸೆಂಬರ್ 2024, 16:16 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಸುವರ್ಣ ವಿಧಾನಸೌಧ(ಬೆಳಗಾವಿ): ಉತ್ತರಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಸರ್ಕಾರ ರಚಿಸಿದ್ದ ಪ್ರೊ.ಗೋವಿಂದರಾವ್‌ ಅವರ ಉನ್ನತಾಧಿಕಾರ ಸಮಿತಿ ವರದಿ ಕೊಟ್ಟ ತಕ್ಷಣವೇ ಅದನ್ನು ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಳೆದ ನಾಲ್ಕು ದಿನಗಳಿಂದ ವಿಧಾನಸಭೆಯಲ್ಲಿ ನಡೆದ  ಉತ್ತರ ಕರ್ನಾಟಕದ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಅವರು ಉತ್ತರ ನೀಡಿದರು.

ADVERTISEMENT

‘ಸರ್ಕಾರ ದಿವಾಳಿಯಾಗಿದ್ದು ಕಾಟಾಚಾರಕ್ಕೆ  ಅಧಿವೇಶನ ನಡೆಸಿದ್ದೀರಿ. ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿಲ್ಲ’ ಎಂದು ದೂರಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ತಮ್ಮ ಸದಸ್ಯರ ಜತೆಗ ಸಭಾತ್ಯಾಗ ಮಾಡಿದರು.

ಬಳಿಕ ಸುದೀರ್ಘ ಉತ್ತರ ನೀಡಿದ ಸಿದ್ದರಾಮಯ್ಯ, ಸರ್ಕಾರ ನೀಡಿದ ಕೊಡುಗೆಗಳನ್ನು ವಿವರಿಸಿದರಲ್ಲದೇ, ಕೆಲವು ಭರವಸೆಗಳನ್ನೂ ನೀಡಿದರು.

‘ನಂಜುಂಡಪ್ಪ ವರದಿಯ ಪ್ರಕಾರ 2007–09 ರಿಂದ 2023–24 ರವರೆಗೆ ₹35 ಸಾವಿರ ಕೋಟಿಗೂ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಅದರಲ್ಲಿ, ಉತ್ತರ ಕರ್ನಾಟಕದ 14 ಜಿಲ್ಲೆಗಳಿಗೆ ₹17,500 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ನಿರೀಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲವೆಂದು ಬಹುಪಾಲು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಹಿಂದಿನ ವರ್ಷ ಬೆಳಗಾವಿ ಅಧಿವೇಶನದಲ್ಲಿ  ಉನ್ನತಾಧಿಕಾರ ಸಮಿತಿ ರಚಿಸುವುದಾಗಿ ಘೋಷಿಸಿದ್ದೆವು. ಅದೇ ಪ್ರಕಾರ ನಾವು ಸಮಿತಿ ರಚಿಸಿದ್ದೇವೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ಆಲಮಟ್ಟಿ ಜಲಾಯಶಯದ ಎತ್ತರವನ್ನು 519 ಮೀಟರ್‌ಗಳಿಂದ 546.256 ಮೀಟರ್‌ಗಳಿಗೆ ಹೆಚ್ಚಿಸಲಾಗುವುದು. ಇದರಿಂದ ಮುಳುಗಡೆಯಾಗುವ ಸುಮಾರು 73 ಸಾವಿರ ಎಕರೆ ಭೂಮಿಯನ್ನು ಕನ್ಸೆಂಟ್ ಅವಾರ್ಡಿನ ಮೂಲಕ ಒಂದೇ ಹಂತದಲ್ಲಿ ರೈತರ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

‌‘ಈ ಭಾಗದಲ್ಲಿ ಮಳೆ ಮುಂತಾದ ಕಾರಣಗಳಿಂದ ಹಾನಿಯಾಗಿರುವ ರಸ್ತೆ ಅಭಿವೃದ್ದಿ ಕುರಿತು ಆದ್ಯತೆ ಮೇರೆಗೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

‘ಈ ಭಾಗದ  ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ವಾಗ್ದಾನ ಮಾಡಿದರು.

‘ಮಹದಾಯಿ ಯೋಜನೆಯನ್ನು ನಾವು ಶೀಘ್ರವಾಗಿ ಅನುಷ್ಠಾನ ಮಾಡಲು ಉದ್ದೇಶಿಸಿದ್ದೇವೆ. ಆದರೆ, ಕೇಂದ್ರದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಯೋಜನೆಗೆ ಒಪ್ಪಿಗೆ ನೀಡದೇ ಸತಾಯಿಸುತ್ತಿದೆ. ಆದ್ದರಿಂದ,ಕೇಂದ್ರ ಸರ್ಕಾರವು ಈ ಕೂಡಲೇ ಒಪ್ಪಿ ನೀಡಬೇಕೆಂದು ಈ ಸದನದ ಪರವಾಗಿ ಒತ್ತಾಯಿಸುತ್ತೇನೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.